ಜು.30ರೊಳಗೆ ಬಿಜೆಪಿ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ ಖಚಿತ : ಸಿದ್ದರಾಮಯ್ಯ
ಜುಲೈ 30 ರೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದಾರೆ.
ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ.
ಇಂದು ಮಧ್ಯಾಹ್ನ ಕಾಂಗ್ರೆಸ್ ಮುಖಂಡರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಬಿ.ಕೆ.ಹರಿಪ್ರಸಾದ್, ವೆಂಕಟರಮಣಯ್ಯ, ಮಾಜಿ ಸಂಸದ ಧ್ರುವನಾರಾಯಣ್, ಕೃಷ್ಣಪ್ಪ, ಐವಾನ್ ಡಿಸೋಜಾ ಸೇರಿ ಹಲವರ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮುಂದಿನ ರಾಜಕೀಯ ನಡೆಯ ಕುರಿತು ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮುಖಂಡರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮಸರ್ಕಾರವೇನೋ ಬಿದ್ದು ಹೋಗಿದೆ. ಬಿಜೆಪಿಯವರು ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಅವರು ಸರ್ಕಾರ ರಚಿಸೋದು ಅಷ್ಟು ಸುಲಭವಲ್ಲ. ಈಗ ಮುಂಬೈನಲ್ಲಿ ಇದ್ದವರನ್ನ ಒಬ್ಬೊಬ್ಬರನ್ನೇ ಕಳಿಸುತ್ತಿದ್ದಾರೆ. ನನ್ನ ಹೆಸರನ್ನೇ ಎಲ್ಲರ ಬಾಯಲ್ಲಿಯೂ ಹೇಳಿಸುತ್ತಿದ್ದಾರೆ. ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಮುಂಬೈಗೆ ತೆರಳಿರುವ ಶಾಸಕರಿಗೂ ಈಗ ಸಾಕಾಗಿರುತ್ತದೆ. ಯಾಕಾದರೂ ನಾವು ಪಕ್ಷ ಬಿಟ್ಟು ಬಂದಿದ್ದೇವೋ, ಮತ್ತೆ ನಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಸರ್ಕಾರ ರಚಿಸಿದರೂ ಪಕ್ಷ ತೊರೆದು ಹೋದವರಿಗೆ ಒಳ್ಳೆಯದಾಗುತ್ತಾ. ಅಲ್ಲಿ ಬಿಜೆಪಿ ಒಳಗಿರುವವರು ಸುಮ್ಮನೆ ಕೂರ್ತಾರಾ. ಅಲ್ಲಿಯೂ ಜಗಳ ಪ್ರಾರಂಭವಾಗುತ್ತದೆ ನೋಡ್ತಿರಿ.
30ರೊಳಗೆ ಸರ್ಕಾರ ರಚನೆ ಮಾಡದಿದ್ದರೆ ಅತಂತ್ರವಾಗಬಹುದು. ನನ್ನ ಪ್ರಕಾರ ಮಧ್ಯಂತರ ಚುನಾವಣೆ ಬಂದೇ ಬರುತ್ತದೆ. ನೀವು ಚುನಾವಣೆಯತ್ತ ಗಮನ ಹರಿಸಿ. ನಮಗೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶಗಳು ಹೆಚ್ಚಿವೆ ಎಂದು ಸಿದ್ದರಾಮಯ್ಯ ಮುಖಂಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.