ಬಿಜೆಪಿಗೆ ಅಪಮಾನಕಾರಿಯಾಗಿ ವರ್ತಿಸಿದರೆ,ಪ್ರತಿರೋಧಿಸಲು ಗೊತ್ತಿದೆ:ಕೋಟ
ಉಡುಪಿ: ‘ಶಾಸಕ ಡಿ.ಕೆ. ಶಿವಕುಮಾರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಲಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿಯೂ ಜೈಲಿಗೆ ಹೋಗಲಿಲ್ಲ’ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್ ಬಂಧನ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ನಡವಳಿಕೆ ವಿಚಿತ್ರ ಹಾಗೂ ಖಂಡನಾರ್ಹ. ಬಂಧನ ಕಾನೂನಾತ್ಮಕ ವಿಚಾರ. ಬಂಧನ ಖಂಡಿಸಿ ಧರಣಿ, ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದು ಖಂಡನಾರ್ಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇ.ಡಿ ಯಿಂದ ಅನ್ಯಾಯವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ಬದಲಾಗಿ, ಬಿಜೆಪಿಗೂ ಪ್ರತಿರೋಧ ತೋರಿಸುವುದು ಗೊತ್ತಿದೆ’ ಎಂದು ಎಚ್ಚರಿಕೆ ನೀಡಿದರು.
‘ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡುವುದು ಸರಿಯಲ್ಲ. ಹಿಂದೆ ಜಗನ್ ಮೋಹನ್ ರೆಡ್ಡಿ, ಜನಾರ್ದನ ರೆಡ್ಡಿ ಬಂಧನವಾದಾಗ ಯಾರೂ ಈ ರೀತಿ ನಡೆದುಕೊಳ್ಳಲಿಲ್ಲ’ ಎಂದು ಅವರು ಹೇಳಿದರು