ಚೀನಾ, ಇಟಲಿಯಂತೆ ಸಾಮೂಹಿಕವಾಗಿ ಸೋಂಕು ಹರಡಿದರೆ ನಿಯಂತ್ರಣ ಕಷ್ಟವಿದೆ: ಜಿಲ್ಲಾ ಸರ್ಜನ್‌

ಉಡುಪಿ: ‘ಭಾರತದಲ್ಲಿ ಕೊರೊನಾ ವೈರಸ್‌ ವಿದೇಶಗಳಿಂದ ಬಂದವರಿಂದ ಹರಡುವ ಭೀತಿ ಹೆಚ್ಚಿದ್ದು, ಇವರನ್ನು ನಿಯಂತ್ರಿಸಬೇಕು. ಈ ಮೂಲಕ ಇನ್ನಷ್ಟು ಜನರಿಗೆ ಸೋಂಕು ಹರಡದಂತೆ ಎಚ್ಚರವಹಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ. ಮಧುಸೂದನ್‌ ನಾಯಕ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ, ಇಟಲಿಯಂತೆ ಇಲ್ಲಿ ಸಾಮೂಹಿಕವಾಗಿ ಸೋಂಕು ಹರಡಿದರೆ ನಿಯಂತ್ರಣ ಮಾಡುವುದು ಬಹಳ ಕಷ್ಟವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದೇಶದಿಂದ ಬಂದವರಲ್ಲಿ ಶಂಕಿತ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಲ್ಲಿ ಅಂತಹವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಬೇಕು. ದಾಖಲಾದ ವ್ಯಕ್ತಿಗಳ ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಈಗ ಕಳುಹಿಸಿ ಕೊಟ್ಟ ಒಂದು ದಿನದಲ್ಲಿ ವರದಿಯ ಫಲಿತಾಂಶ ಬರಲಿದ್ದು, ಅದರಲ್ಲಿ ವ್ಯಕ್ತಿಗೆ ಸೋಂಕು ಇದೆಯೇ ಅಥವಾ ಇಲ್ಲವೇ ಎಂಬುವುದು ದೃಢಪಡಲಿದೆ. ಈವರೆಗೆ ಜಿಲ್ಲೆಯಿಂದ ಕಳುಹಿಸಿಕೊಟ್ಟ ಎಲ್ಲ ವರದಿಗಳಲ್ಲಿ ನೆಗೆಟಿವ್‌ ಬಂದಿದೆ ಎಂದು ತಿಳಿಸಿದರು.

ಒಂದು ಬಾರಿ ಸೋಂಕು ತಗಲಿದ ವ್ಯಕ್ತಿಗಳಿಗೆ ಮತ್ತೊಮ್ಮೆ ಸೋಂಕು ಬರುವ ಸಾಧ್ಯತೆಗಳಿವೆ. ಹಾಗಾಗಿ ನೆಗೆಟಿವ್‌ ಬಂದಂತಹ ವ್ಯಕ್ತಿಗಳು ಕೂಡ ಮನೆಗೆ ಹೋಗಿ ಕೆಲ ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಶಶಿಕಿರಣ್‌ ಉಮಾಕಾಂತ್‌ ಮಾತನಾಡಿ, ಕೊರೊನಾ ವೈರಸ್‌ಗೆ ಶೀಘ್ರವಾಗಿ ಹರಡುವಿಕೆಯ ಗುಣ ಇರುವುದರಿಂದ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಇದು ಸಾಮಾನ್ಯ ಜ್ವರ, ಶೀತ, ಕೆಮ್ಮುವಿನ ಲಕ್ಷಣ ಹೊಂದಿದ್ದು, ಪ್ರಾಥಮಿಕ ಹಂತದಲ್ಲಿ ಇದನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದರು.


ಕೊರೊನಾ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಹಾಗೂ ಮಧುಮೇಹ, ಹೃದಯ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಹೆಚ್ಚು ತೊಂದರೆ ಉಂಟು ಮಾಡುತ್ತದೆ. ಅಂತಹವರ ಪ್ರಾಣಕ್ಕೂ ಕುತ್ತು ತರಬಹುದು. ಆರಂಭದಲ್ಲಿ ನೆಗಡಿ, ಶೀತದಿಂದ ಶುರುವಾಗಿ ಉಸಿರಾಟದ ಸಮಸ್ಯೆ, ನ್ಯೂಮೊನಿಯಾದಂತಹ ಸಮಸ್ಯೆ ಉಲ್ಬಣಿಸುತ್ತವೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಉಡುಪಿ–ಕರಾವಳಿ ವಲಯದ ಮಾಧ್ಯಮ ಸಲಹೆಗಾರ ಡಾ. ಪಿ.ವಿ. ಭಂಡಾರಿ ಮಾತನಾಡಿ, ಕೊರೊನಾ ಸೋಂಕು ಕಾಣಿಸಕೊಂಡಿರುವ ಪ್ರದೇಶದ ವ್ಯಕ್ತಿ ಇನ್ನೊಂದು ಸ್ಥಳಕ್ಕೆ ಹೋಗಿ ಸೋಂಕು ಹರಡುವಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದು, ಅದನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದರು.

ಹೆಚ್ಚಿನ ತಾಪಮಾನದಲ್ಲಿ ವೈರಸ್‌ ಹರಡುವುದಿಲ್ಲ. ಹಾಲ್ಕೋಹಾಲ್‌ ಕುಡಿ
ದರೆ ವೈರಸ್‌ ಬರುವುದಿಲ್ಲ ಎಂಬುವುದೆಲ್ಲ ಕೇವಲ ವದಂತಿ. ಸದ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಮಾತ್ರ ಸೋಂಕಿನಿಂದ ಪಾರಾಗಬಹುದು. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಉಡುಪಿ–ಕರಾವಳಿ ವಲಯದ ಅಧ್ಯಕ್ಷ ಡಾ. ಉಮೇಶ್‌ ಪ್ರಭು, ಡಾ. ಪ್ರಕಾಶ್‌ ಭಟ್‌ ಇದ್ದರು.

‘28 ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಡಿ’

‘ವಿದೇಶಗಳಿಂದ ಬಂದವರಲ್ಲಿ ರೋಗದ ಲಕ್ಷಣ ಇರಲಿ ಅಥವಾ ಇಲ್ಲದೆ ಇದ್ದರೂ ಅವರು ಕಡ್ಡಾಯವಾಗಿ 28 ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು. ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು. ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳು ಕೂಡ ಮಾಸ್ಕ್‌ ಧರಿಸಬೇಕು ಹಾಗೂ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಜಿಲ್ಲಾ ಸರ್ಜನ್‌ ಡಾ. ಮಧುಸೂದನ್‌ ನಾಯಕ್‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!