ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ: ಬಡಕುಟುಂಬಗಳಿಗೆ ಕಿಟ್ ವಿತರಣೆ
ಉದ್ಯಾವರ: ಸಂತ ಫ್ರಾನ್ಸಿಸ್ ದೇವಾಲಯದ ವ್ಯಾಪ್ತಿಗೆ ಒಳಪಟ್ಟ ಭಾರತೀಯ ಕೆಥೋಲಿಕ್ ಯುವ ಸಂಚಲನ (ಐಸಿವೈಎಂ) ಸಂಘಟನೆಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಕೋರೊನ ಹಾವಳಿಯಿಂದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯು ಉದ್ಯಾವರದ ಆಸುಪಾಸಿನ ಜಾತಿ ಮತ ಭೇದವಿಲ್ಲದೆ 103 ಅತಿ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ, ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ಅವರ ಮನೆಗಳಿಗೆ ತೆರಳಿ ಹಸ್ತಾಂತರಿಸಲಾಯಿತು.
ದೇವಾಲಯದ ವಠಾರದಲ್ಲಿ ನಡೆದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಪ್ರಧಾನ ಧರ್ಮ ಗುರುಗಳಾಗಿರುವ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ನೊಂದವರ ಮತ್ತು ಅಶಕ್ತರ ಹಾಗೂ ಅತಿ ಅಗತ್ಯವಿರುವ ಕುಟುಂಬಗಳಿಗೆ ಸಹಾಯ ಮಾಡಿದರೆ ದೇವರ ಆಶೀರ್ವಾದ ಸದಾ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅತಿ ಅಗತ್ಯವಿರುವವರ ಪಾಲಿಗೆ ಬೆಳಕಾಗೋಣ ಎಂದರು. ಬಳಿಕ ಎಲ್ಲ ವಸ್ತುಗಳ ಮೇಲೆ ಆಶೀರ್ವಾದ ಮಾಡಿದರು.
ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ, ಮುಂದಿನ ದಿನಗಳಲ್ಲಿಯೂ ಅಗತ್ಯವಿರುವವರಿಗೆ ಸಹಕಾರ ಮಾಡುತ್ತೇವೆ ಎಂದು ಹೇಳಿದರಲ್ಲದೆ, ಸಹಕಾರ ನೀಡಿದವರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ. ಫಾ. ರೊಲ್ವಿನ್ ಅರಾನ್ನ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಮೆಲ್ವಿನ್ ನೊರೊನ್ನ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖರಾದ ಜೆರಾಲ್ಡ್ ಪಿರೇರ, ವಿಲ್ಫ್ರೆಡ್ ಕ್ರಾಸ್ಟೊ, ಜೂಲಿಯಾ ಡಿಸೋಜ, ಜೋನ್ ಗೋಮ್ಸ್, ರೋಯ್ಸ್ ಫೆರ್ನಾಂಡಿಸ್, ವಿಲ್ಫ್ರೆಡ್ ಡಿಸೋಜಾ, ಎರಿಕ್ ಮಿನೇಜಸ್, ಮ್ಯಾಕ್ಸಿಮ್ ಡಿಸಿಲ್ವಾ, ಲಾರೆನ್ಸ್ ಡೇಸಾ, ಟೆರೆನ್ಸ್ ಪಿರೇರಾ, ಪ್ರಿಯಾಂಕಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.