ಕಾಂಗ್ರೆಸ್ಸಿನಲ್ಲೇ ಇದ್ದೇನೆ: ಪ್ರಮೋದ್
ಉಡುಪಿ: ಮಂಜೇಶ್ವರ ವಿಧಾನಸಭಾ ಉಪಚುನಾವಣಾ ಪ್ರಚಾರಕ್ಕೆ ಬರುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‍ಗೆ ಕೆಪಿಸಿಸಿ ಹಾಗೂ ಎಐಸಿಸಿಯಿಂದ ಕರೆ ಬಂದಿದೆ. ಕೇರಳದ ಉಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ದಿನೇಶ್ ಗುಂಡೂರಾವ್ ಮತ್ತು ವಿಷ್ಣುನಾಥನ್, ಉಪ್ಪಳದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಆಹ್ವಾನಿಸಿದ್ದಾರೆ.
ಲೋಕ ಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸೇರ್ಪಡೆಗೆ ಕಾಯುತ್ತಿದ್ದರು. ಪ್ರಮೋದ್ ಜೆಡಿಎಸ್ ಅಭ್ಯರ್ಥಿಯಾದ ನಂತರ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗಬೇಕಾದರೆ ಅಪ್ಲಿಕೇಶನ್ ಹಾಕಬೇಕು ಎಂದು ಮಾಜಿ ಸಿಎಂ ವೀರಪ್ಪ ಮೋಯ್ಲಿ ಹೇಳಿದ್ದರು. ಈ ಸಂಬಂಧ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಪತ್ರ ಬರೆದಿರುವ ಪ್ರಮೋದ್ ಮಧ್ವರಾಜ್, ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶಕ್ಕಾಗಿ ಪತ್ರದಲ್ಲಿ ಕೋರಿದ್ದೇನೆ. ಸೇರ್ಪಡೆ ಮಾಡಿ ಎಂದು ಪತ್ರ ಕೊಟ್ಟದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆ ಯಾವ ಪಕ್ಷದವರೂ ನನ್ನನ್ನು ಈವರೆಗೆ ಸಂಪರ್ಕ ಮಾಡಿಲ್ಲ. ನಾನು ಮೈತ್ರಿ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರಿಂದ ಸ್ಪರ್ಧೆ ಮಾಡಿದ್ದೇನೆ. ಶಾಲಿನಲ್ಲೂ ಕೈ ಚಿಹ್ನೆ ಬಿಟ್ಟಿರಲಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡಲೇ ಇಲ್ಲ, ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಛಾಟನೆ ಮಾಡಿರಲಿಲ್ಲ. ಹಾಗಾಗಿ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಪ್ರಮೇಯ ಬರುವುದಿಲ್ಲ. ತಾಂತ್ರಿಕವಾಗಿ ಕೆಲವು ಸಮಸ್ಯೆಗಳಿತ್ತು, ಕಾಂಗ್ರೆಸ್ ನಾಯಕರೇ ಕರೆ ಮಾಡಿದ್ದರಿಂದ ಸಮಸ್ಯೆ ನಿವಾರಣೆಯಾಗಿದೆ. ದೈಹಿಕವಾಗಿ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ, ಎಲ್ಲೂ ಹೋಗಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮತ್ತು ವಿಧಾನಸೌಧಕ್ಕೆ ಮಾಧ್ಯಮ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ದೇಶದಲ್ಲಿ ಬಿಜೆಪಿ ನಾಯಕರಿದ್ದಾರೆ. ನಮ್ಮ ಮಂತ್ರಿಗಳು ಲಂಚ ತಗೋಳೋದಿಲ್ಲ ಎಂದು ಬಿಜೆಪಿ ಘೋಷಣೆ ಮಾಡಲಿ. ನಮ್ಮಲ್ಲಿ ಕಪ್ಪು ಹಣ ಇಲ್ಲ, ನಾವು ಪಾರ್ಟಿ ಫಂಡ್ ಉಪಯೋಗಿಲ್ಲ ಎಂದು ಬಿಜೆಪಿ ಘೋಷಿಸಲಿ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿರೋಧ ಪಕ್ಷವನ್ನು ಸಂಪೂರ್ಣ ಮುಗಿಸಲು ಬಿಜೆಪಿ ಮುಂದಾಗಿದೆ. ವಿಧಾನಸೌಧದೊಳಗೆ ಮಾಧ್ಯಮಗಳನ್ನು ಬಿಜೆಪಿ ನಿಷೇಧ ಮಾಡುತ್ತಿದೆ. ಪ್ರಜಾಪ್ರಭುತ್ವಕ್ಕೆ ಬಿಜೆಪಿ ಕೊಡಲಿಯೇಟು ಕೊಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು