ಕಾರ್ಕಳದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಬೃಹತ್ ಜಾಥಾ
ಕಾರ್ಕಳ : ಕೇಂದ್ರ ಸರಕಾರವು ಜಾರಿಗೊಳಿಸಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಬೃಹತ್ ಜಾಥಾ ಸೋಮವಾರ ನಡೆಯಿತು.
ಕಾರ್ಕಳ ಅನಂತಶಯನದಿಂದ ಆರಂಭವಾದ ಜಾಥಾದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮಂಜುನಾಥ ಪೈ ಸಭಾಂಗಣಕ್ಕೆ ಸಾಗಿ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಪೌರತ್ವ ನೀಡುವ ಕಾಯಿದೆಯೇ ಹೊರತು ಪೌರತ್ವ ಕಿತ್ತುಕೊಳ್ಳುವ ಕಾಯಿದೆ ಅಲ್ಲ. 2014ರ ಡಿ.21 ರೊಳಗೆ ಅತ್ಯಾಚಾರ, ಮತಾಂತರ, ಹಲ್ಲೆ, ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿರುವ ೬ ಧರ್ಮಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯಿದೆ, ಆದರೆ ಕಾಯಿದೆಯನ್ನು ಓದುವ ಸೌಜನ್ಯತೆಯಿಲ್ಲದ ಕಾಂಗ್ರೆಸಿಗರು ಈ ಕಾಯಿದೆ ಕುರಿತು ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ ದೇಶದಾದ್ಯಂತ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸ್ವಾತಂತ್ರ್ಯಾನಂತರ ನೆಹರೂ ವೈಫಲ್ಯದಿಂದ ಭಾರತ ವಿಭಜನೆಯ ಬಳಿಕ ಜಿನ್ನಾ ಪಾಕಿಸ್ತಾನವನ್ನು ಪ್ರತ್ಯೇಕ ಮುಸ್ಲಿಂ ರಾಷ್ಟ್ರವಾಗಿ ಘೋಷಣೆ ಮಾಡಿದ್ದರು. ಆದರೆ ಭಾರತ ಎಂದಿಗೂ ಜಾತ್ಯಾತೀತ ರಾಷ್ಟ್ರವಾಗಿ ಎಲ್ಲಾ ಧರ್ಮದವರಿಗೂ ಸಮಾನ ನ್ಯಾಯ ಕಲ್ಪಿಸಿದೆ. ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಮುಸ್ಲಿಮರು ಎಂದಿಗೂ ಭಾರತೀಯರು ಆದರೆ ಅಕ್ರಮ ನುಸುಳುಕೋರರನ್ನು ಮುಲಾಜಿಲ್ಲದೆ ದೇಶದಿಂದ ಹೊರಗಟ್ಟಲಾಗುತ್ತದೆ ಎಂದರು. ಭಾರತ ಎಂದಿಗೂ ಭೋಗ ಭೂಮಿಯಲ್ಲ, ದೇಶಕ್ಕಾಗಿ ಹುತಾತ್ಮರಾದ ಸಾವಿರಾರು ಜನರ ಪುಣ್ಯ ಭೂಮಿಯಾಗಿದೆ ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಈ ಕಾಯ್ದೆ ಭಾರತದ ಮುಸ್ಲಿಮರ ಪೌರತ್ವವನ್ನು ಕಸಿಯುವುದಿಲ್ಲ, ಬದಲಾಗಿ ಅವರ ಬದುಕನ್ನು ಗಟ್ಟಿಗೊಳಿಸುವ ಕಾಯಿದೆಯಾಗಿದೆ ಎಂದರು. ಧಾರ್ಮಿಕ ಹಿಂಸೆಗೊಳಗಾದ ೩ ದೇಶಗಳ ಅಲ್ಪಸಂಖ್ಯಾತರಿಗೆ, ತೊಂದರೆಯಾದವರಿಗೆ ದೇಶದ ಗಡಿಯನ್ನು ಗಟ್ಟಿಗೊಳಿಸಲು ಆರ್ಥಿಕತೆಯನ್ನು ಸದೃಢಗೊಳಿಸಲು ಈ ಕಾಯಿದೆ ಎಂದರು. ಅಕ್ರಮ ನುಸುಳುಕೋರರಿಗೆ ಪೌರತ್ವ ಕೊಡಲು ನಮ್ಮ ದೇಶ ಧರ್ಮಛತ್ರ ಅಲ್ಲ, ಈ ದೇಶದ ರಾಷ್ಟ್ರೀಯತೆ ಬೆಂಬಲಿಸುವವರು ಈ ಕಾಯಿದೆ ಬೆಂಬಲಿಸಿದರೆ, ದೇಶದ ರಾಷ್ಟ್ರೀಯತೆ ಭದ್ರತೆ ವಿರುದ್ಧ ಇರುವವರು ಈ ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ ಎನ್ನವುದು ಸ್ಪಷ್ಟವಾಗಿದೆ ಎಂದರು.
ಸ್ವಯಂಪ್ರೇರಿತವಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಪೌರತ್ವ ನೀಡಲಾಗುತ್ತದೆ, ಬದಲಾಗಿ ಯಾರಿಗೂ ಬಲವಂತವಾಗಿ ಪೌರತ್ವ ನೀಡುವ ಉದ್ದೇಶ ನಮ್ಮದಲ್ಲ ಎಂದರು. ದೇಶದ ಅಖಂಡತೆ ಕಾನೂನು ಗೌರವಿಸುವವರು ಮಾತ್ರ ನಿಜವಾದ ಭಾರತೀಯ ನಾಗರಿಕರು ಎಂದು ಸೂಚ್ಯವಾಗಿ ವಿವರಿಸಿದರು.
ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಶೋಷಣೆ ಮಾಡಿದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆಯೇ ಹೊರತು ನುಸುಳುಕೋರರಿಗೆ, ಭಯೋತ್ಪಾದಕರಿಗೆ, ದೇಶದ ಭದ್ರತೆಗೆ ಅಪಾಯಕಾರಿಯಾಗುವವರಿಗೆ ಪೌರತ್ವ ನೀಡಲಾಗುವುದಿಲ್ಲ ಎಂದರು. ದೇಶದ ಭದ್ರತೆಯ ಹಿತದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯಿದೆ ಹಿಂದಿನ ಕಾಂಗ್ರೆಸ್ ಸರಕಾರವೇ ಜಾರಿಗೊಳಿಸಿತ್ತು. ಆದರೆ ಇದೀಗ ಓಟಿನ ಆಸೆಗಾಗಿ ರಾಷ್ಟ್ರೀಯ ಹಿತಾಸಕ್ತಿ ಬಲಿಕೊಡಲಾಗುತ್ತಿದೆ ಎಂದು ಆರೋಪಿಸಿದರು.