ಆಶ್ಲೇಷನ ರೌದ್ರನರ್ತನ – ಕುಸಿದು ಧರೆಶಾಹಿಯಾಗುತ್ತಿರುವ ಗುಡ್ಡ, ಮನೆ, ಮರಗಳು : ಜನರಲ್ಲಿ ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಳೆರಾಯನ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಪ್ರವಾಹವಾದರೆ, ಇನ್ನೊಂದೆಡೆ ಗುಡ್ಡ, ಮನೆ, ವಿದ್ಯುತ್ ಕಂಬಗಳು ಕುಸಿದು ಬೀಳುತ್ತಿದ್ದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಯಾದಗಿರಿ, ಮಡಿಕೇರಿ, ಕೊಡಗು, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ರೌದ್ರನರ್ತನಕ್ಕೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾರ್ಮಾಡಿ ಘಾಟ್ ಹಾಗೂ ಚೋರ್ಲಾ ಘಾಟಿನ ರಸ್ತೆಯಲ್ಲಿ ಮಳೆಗೆ ಗುಡ್ಡದ ಮಣ್ಣು ಕುಸಿಯುತ್ತಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಅರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲದ ಸಂಗಮ ಕ್ಷೇತ್ರ ಜಲಾವೃತವಾಗಿದ್ದರೆ, ಇತ್ತ ವಿರಾಜಪೇಟೆ ತಾಲೂಕಿನ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಯೂ ತುಂಬಿ ಹರಿಯತೊಡಗಿದೆ. ದಕ್ಷಿಣ ಕೊಡಗಿನ ಕೆಲವೆಡೆ ಮಳೆಯ ರಭಸ ಹೆಚ್ಚಾದ ಪರಿಣಾಮ ಒಂದಷ್ಟು ಅನಾಹುತಗಳು ಸಂಭವಿಸಿವೆ. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಭಾಗ ಕುಸಿದಿದ್ದು, ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.

ಮಡಿಕೇರಿಯಲ್ಲಿಯೂ ಗಾಳಿ ಸಮೇತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ನಡೆದ ಸ್ಥಳವಾದ ಮದೆನಾಡು ಬಳಿ ನೀರಿನ ಹರಿವು ಹೆಚ್ಚಾಗಿ ಆಂತಕದ ವಾತಾವರಣ ಸೃಷ್ಟಿಯಾಗಿದೆ. ಇತ್ತ ಕಾಲೂರು ಗ್ರಾಮದಲ್ಲಿ ಸಣ್ಣ ಪುಟ್ಟದಾಗಿ ಗುಡ್ಡಗಳು ಕುಸಿಯುತ್ತಿದ್ದು, ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.

ಚಾರ್ಮಾಡಿ ಘಾಟ್ ಮಾರ್ಗದ ಚಿಕ್ಕಮಗಳೂರು- ದಕ್ಷಿಣ ಕನ್ನಡ ಸಂಪರ್ಕ ಕಡಿತಗೊಂಡಿದ್ದು, ರಸ್ತೆಗೆ ಬಿದ್ದಿದ್ದ ಮಣ್ಣನ್ನ ತೆರವುಗೊಳಿಸಲು ಹರಸಾಹಸ ಪಡಲಾಗುತ್ತಿದೆ. ರಾತ್ರಿಯಿಡೀ ಸಾರ್ವಜನಿಕರು, ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತ ಬಣಕಲ್, ಬೆಳ್ತಂಗಡಿ ಪೊಲೀಸರು ಆಗಮಿಸಿ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ರಸ್ತೆಯಲ್ಲಿ ವಾಹನ ಸಿಲುಕಿಕೊಂಡು ಪ್ರಯಾಣಿಕರು ಪರದಾಡುತ್ತಿದ್ದಾರೆ. ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಪರಿಣಾಮ ಕಳಸ-ಹೊರನಾಡು ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಇತ್ತ ಮಲೆನಾಡಲ್ಲಿ ಮಳೆ-ಗಾಳಿ ಮುಂದುವರಿದಿದ್ದು, ಬಿರುಗಾಳಿ ರಭಸಕ್ಕೆ ತರೀಕೆರೆ ತಾಲೂಕಿನ ಬರಗೇನಹಳ್ಳಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು ಧರೆಗುರುಳಿದೆ. ಮಳೆಯ ಆರ್ಭಟಕ್ಕೆ ತೀರ್ಥಹಳ್ಳಿ ತಾಲೂಕು ಕೂಡ ತತ್ತರಿಸಿ ಹೋಗಿದೆ. ತುಂಗಾ ನದಿ ಅಪಾಯದ ಮಟ್ಟ ತಲುಪಿದ್ದು, ಐತಿಹಾಸಿಕ ರಾಮಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಥಬೀದಿಯ ಅರಳಿಕಟ್ಟೆವರೆಗೂ ನದಿ ನೀರು ಬಂದಿದೆ. ನೀರಿನ ಮಟ್ಟ ಇನ್ನೂ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ಮನೆಗಳನ್ನು ತೆರೆವುಗೊಳಿಸಲಾಗುತ್ತಿದೆ. ಹಲವೆಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತೀರ್ಥಹಳ್ಳಿ -ಗುಡ್ಡೇಕೇರಿ- ಶೃಂಗೇರಿ ಮಾರ್ಗ ಬಂದ್ ಆಗಿದ್ದು, ನಾಬಳ ಸೇತುವೆ ಮೇಲೆ ಎರಡು ಅಡಿ ನೀರು ತುಂಬಿಕೊಂಡಿದೆ.

ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮುಂದುವರಿದ ಮಳೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದೆ. ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತಕ್ಕೆ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಗೋವಾ-ಬೆಳಗಾವಿ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ ಮೇಲೆ ಗುಡ್ಡ ಕುಸಿತಗೊಂಡ ಕಾರಣಕ್ಕೆ ಲಾರಿಯಲ್ಲಿದ್ದ ಮೂವತ್ತು ಕುರಿಗಳು ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಅಲ್ಲದೆ ಬೆಳಗಾವಿ ತಾಲೂಕಿನ ಚಂದನಹೊಸುರು ಗ್ರಾಮದ ವ್ಯಕ್ತಿ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದಾನೆ.

ಮಹಾರಾಷ್ಟ್ರದ ಕೊಯ್ನಾದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಅಥಣಿ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗಿದ್ದು, ದರೂರ್ ಮುಖ್ಯ ಸೇತುವೆ ಸಂಚಾರ್ ಸ್ಥಗಿತಗೊಂಡಿದೆ. ಸೇತುವೆ ಜಲಾವೃತ್ತಗೊಂಡ ಕಾರಣಕ್ಕೆ ಜತ್ತ-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಅಲ್ಲದೆ ಅಥಣಿ ತಾಲೂಕು ಹಾಗೂ ರಾಯಭಾಗ, ಗೋಕಾಕ್ ತಾಲೂಕುಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸೇತುವೆ ಮೇಲೆ ಜನರು ಓಡಾಡದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಸವದತ್ತಿಯ ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ರಾಮದುರ್ಗದ ಹಳ್ಳಿಗಳಿಗೆ ನೀರು ನುಗ್ಗಿದೆ. ಮಲಪ್ರಭಾ ಜಲಾಶಯದಿಂದ ನಿನ್ನೆ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿತ್ತು, ಈ ಹಿನ್ನೆಲೆಯಲ್ಲಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಮಂಗಳವಾರದಿಂದಲೇ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಸರಕಾರಿ ಶಾಲೆ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದ್ದು, ನದಿಪಾತ್ರದ ಜನರ ಹಾಗೂ ಜಾನುವಾರುಗಳ ಸ್ಥಳಾಂತರ ಕಾರ್ಯ ಪ್ರಾರಂಭಗೊಂಡಿದೆ.

ಹಿಡಿಕಲ್ ಜಲಾಶಯ ಸಂಪೂರ್ಣ ಬರ್ತಿ ಹಿನ್ನೆಲೆಯಲ್ಲಿ ಸುಮಾರು 90 ಸಾವಿರ ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಇದರಿಂದ ಗೋಕಾಕ ತಾಲೂಕಿನ ಕೊಣ್ಣುರು, ಲೋಳಸೂರು ಗ್ರಾಮಗಳು ಜಲಾವೃತಗೊಂಡಿದೆ. ಅಲ್ಲದೆ ಗೋಕಾಕ್ ಹೊರವಲಯದ ಸಿಂಗ್ಳಾಪುರ ಬಂಗ್ಲೆ ಪ್ರದೇಶದಲ್ಲಿ ಕುಸಿದ ಮನೆ ಘಟಪ್ರಭಾ ನದಿಯ ಹೊಡೆತಕ್ಕೆ ಮನೆಯೊಂದು ಧರೆಗುರುಳುತ್ತಿರುವ ಲೈವ್ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಒಂದೇ ರಾತ್ರಿ ಸುರಿದ ಮಳೆಗೆ 75ಕ್ಕೂ ಹೆಚ್ಚು ಮನೆ ನೆಲಸಮವಾಗಿದೆ. ಇತ್ತ ಧಾರವಾಡ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದ್ದು, ಸುಮಾರು 180 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!