‘ಲೀಲಾವತಿ ಪರಿಣಯ’ ಯಕ್ಷಗಾನ ಪ್ರಸಂಗ ಕೃತಿ ಲೋಕಾರ್ಪಣೆ
ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಹಾಗೂ ಬೆಂಗಳೂರಿನ ಅಭಿ
ನವ ಪ್ರಕಾಶನದ ಜಂಟಿ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕೇಂದ್ರ
ದಲ್ಲಿ ಭಾನುವಾರ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಹದೇವಯಂಕ ಹಳ್ಕೇರ್ ಅವರ ಕಥೆಯಾಧಾರಿತ ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ ರಚಿಸಿದ ‘ಲೀಲಾವತಿ ಪರಿಣಯ’ ಯಕ್ಷಗಾನ ಪ್ರಸಂಗ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಆ ನಂತರ ಮಾತನಾಡಿದ ಅವರು, ‘ಹೊಸ್ತೋಟ ಮಂಜುನಾಥ ಭಾಗವತರು ಉತ್ತಮ ಕೃತಿಕಾರರು ಹಾಗೂ ಹಾಡುಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದಲಿತ ಸಾಹಿತಿ ಮಹದೇವಯಂಕ ಹಳ್ಕೇರ್ ಹಾಗೂ ಹೊಸ್ತೋಟ ಅವರು ಈ ಕೃತಿಯ ಮೂಲಕ ಯಕ್ಷಗಾನಕ್ಕೆ ಮೊತ್ತೊಂದು ಕೊಡುಗೆ ನೀಡಿದ್ದು, ಅವರ ಕಾರ್ಯ ಅಭಿನಂದನೀಯವಾದುದು’ ಎಂದರು.
ಕಲೆ ಮತ್ತು ಶಿಕ್ಷಣ ಇಂದಿನ ಅಗತ್ಯ. ಇದರಿಂದ ಸಾಧನೆ ಮಾಡಲು ಸಾಧ್ಯ. ಯಕ್ಷಗಾನ ವಿದ್ಯಾರ್ಥಿಗಳು ಎರಡರಲ್ಲಿಯೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿ, ‘ಹಳ್ಳಿಯಲ್ಲಿರುವ ವ್ಯಕ್ತಿಗೆ ರಾಷ್ಟ್ರೀಯ ಪ್ರಜ್ಞೆ, ಸಾಮಾಜಿಕ ಚಿಂತನೆ ಬರುವುದು ತುಂಬಾ ಕಷ್ಟ. ಆದರೆ ಮಹದೇವಯಂಕ ಹಳ್ಕೇರ್ ಎಲ್ಲ ವಿಚಾರವಂತರಿಗಿಂತ ಕ್ರಿಯಾಶೀಲರಾಗಿದ್ದಾರೆ’ ಎಂದು ಬಣ್ಣಿಸಿದರು.
ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಮಾತನಾಡಿ, ‘ಯಕ್ಷಗಾನದಲ್ಲಿ ಸಮರ್ಥ ನಿರ್ದೇಶಕರಿಲ್ಲ ಎಂಬ ಅಪವಾದ ಇತ್ತು. ಆದರೆ ಹೊಸ್ತೋಟ ಅವರು ಉತ್ತಮ ಯಕ್ಷಗಾನಗಳನ್ನು ನಿರ್ದೇಶನ ಮಾಡುವ ಮೂಲಕ ಆ ಕೊರಗನ್ನು ದೂರ ಮಾಡಿದ್ದರು’ ಎಂದರು.
ಕಥೆಗಾರ ಮಹದೇವಯಂಕ ಹಳ್ಕೇರ್, ಯಕ್ಷಗಾನ ಕಲಾ ಕೇಂದ್ರದ ಆಡಳಿತಾಧಿಕಾರಿ ವರದೇಶಿ ಹಿರೇಗಂಗೆ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಅಭಿನವ ಪ್ರಕಾಶನದ ರವಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.