ದ.ಕ,ಬೆಂಗಳೂರು,ಮೈಸೂರು, ಗಳಲ್ಲಿ ಹೆಚ್ಚು ನಿಗಾವಹಿಸಲು ಗೃಹ ಸಚಿವರ ಆದೇಶ
ಬೆಂಗಳೂರು: ಸೋಂಕಿತರ ಸಂಖ್ಯೆ ಹೆಚ್ಚಿರುವ ಹಾಗೂ ಸೋಂಕು ಹರಡಬಹುದಾದ ರಾಜ್ಯದ ಎಂಟು ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಎಂದು ಗುರುತಿಸಿದ್ದು, ಇಲ್ಲಿ ಹೆಚ್ಚು ನಿಗಾ ವಹಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ದೇಶದ 170 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿದೆ. ಈ ಪೈಕಿ ಕರ್ನಾಟಕದ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರ್ಗಿ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳು ಸೇರಿವೆ. ಈ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಬುಧವಾರ ವಿಡಿಯೊ ಸಂವಾದ ನಡೆಸಿದ ಬೊಮ್ಮಾಯಿ, ಅಲ್ಲಿನ ಪರಿಸ್ಥಿತಿಗಳ ವಿವರ ಪಡೆದರು. ‘ಬಹುತೇಕ ಜಿಲ್ಲೆಗಳಲ್ಲಿ ಬೆಳಿಗ್ಗೆ ಹೊತ್ತು ಸಾಕಷ್ಟು ಜನ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಬೇಕು. ತರಕಾರಿ, ದಿನಸಿ ಖರೀದಿಗೆ ಸಮಯ ನಿಗದಿ ಮಾಡಬೇಕು. ಆ ವೇಳೆಯಲ್ಲೂ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು. ಅಗತ್ಯ ಸೇವೆ ಒದಗಿಸುವವರ ಹೊರತಾಗಿ ಬೇರೆ ಯಾರೂ ಓಡಾಡದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು. ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ವಿಧಿಸುವುದು ಜಿಲ್ಲಾಡಳಿತದ ಹೊಣೆ. ಜನರ ಓಡಾಟ ನಿರ್ಬಂಧಿಸದೇ ಇದ್ದರೆ ಸೋಂಕು ಹರಡುವುದನ್ನು ತಡೆಯುವುದು ಅಸಾಧ್ಯ. ಹೆಚ್ಚಿನ ಸಂಖ್ಯೆಯ ಪೊಲೀಸ್ ಬಲ ಒದಗಿಸಲು ಸಿದ್ಧ. ಕೇಂದ್ರ ಸರ್ಕಾರದ ಸೂಚನೆಯಂತೆ ಇದೇ 20ರವರೆಗೆ ಬೆಂಗಳೂರು ಸೇರಿದಂತೆ ಹಾಟ್ ಸ್ಪಾಟ್ ಎಂದು ಘೋಷಿಸಿದ ಪ್ರದೇಶಗಳಲ್ಲಿ ಸರ್ಪಗಾವಲು ಹಾಕಿ, ನಿರ್ಬಂಧ ಹೇರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. |