ಮಲ್ಪೆ ಬೀಚ್ ಪ್ರವಾಸಿಗರ ಮೇಲೆ ಲಾಠಿ ಪ್ರಹಾರ – ವಿಡಿಯೋ ವೈರಲ್
ಉಡುಪಿ: ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಮಲ್ಪೆ ಬೀಚ್ಗೆ ಪ್ರವಾಸಿಗರನ್ನು ನಿಬಂಧಿಸಿದ್ದರೂ ಮಡಿಕೇರಿಯ ಪ್ರವಾಸಿಗರು ಇದನ್ನು ಉಲ್ಲಂಘಿಸಿ ಸಮುದ್ರದಲ್ಲಿ ಈಜಲು ತೆರಳಿದ್ದು ಈ ಪ್ರವಾಸಿಗರಿಗೆ ಹೋಮ್ ಗಾರ್ಡ್ ಸಿಬ್ಬಂದಿಗಳು ಲಾಠಿಯ ರುಚಿ ತೊರಿಸಿದ್ದಾರೆ. ನಿಯಮ ಉಲ್ಲಂಘಿಸಿ ಸಮುದ್ರಕ್ಕೆ ಇಳಿದ ಪ್ರವಾಸಿಗರಿಗೆ ಪೊಲೀಸರು ಲಾಠಿಯಿಂದ ಹೊಡೆದಿರುವ ಬಗ್ಗೆ ಆರೋಪಿಲಾಗಿದ್ದು, ಈ ಕುರಿತು ಆಕ್ಷೇಪ ವ್ಯಕ್ತಪಡಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಮಳೆಗಾಲ ಆರಂಭವಾಗಿದ್ದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆ ಮಲ್ಪೆ ಬೀಚ್ಗೆ ಪ್ರವಾಸಿಗರು ಇಳಿಯದಂತೆ ಕಡಲ ಕಿನಾರೆಯಲ್ಲಿ ಎಚ್ಚರಿಕೆ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಒಂದು ಕಿಲೋ ಮೀಟರ್ ಉದ್ದದ ತಡೆ ಬೇಲಿಯನ್ನು ಕೂಡ ಹಾಕಲಾಗಿದೆ. ಆದರೂ ಅದನ್ನು ದಾಟಿ ಕೆಲವು ಪ್ರವಾಸಿಗರು ಸಮುದ್ರಕ್ಕೆ ಇಳಿದಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಹಾಗೂ ಸಮುದ್ರಕ್ಕೆ ಇಳಿದಿರುವವರನ್ನು ವಾಪಸ್ ಬರುವಂತೆ ತಿಳಿಸಿದ್ದಾರೆ. ಆದರೂ ಕೆಲವರು ತಮಗೆ ಈಜಲು ಬರುತ್ತದೆ ಎಂದು ಹೇಳಿ ಉಢಾಫೇಯಿಂದ ವರ್ತಿಸಿದಕ್ಕೆ ಹೊಮ್ ಗಾರ್ಡ್ ಸಿಬ್ಬಂದಿ ಲಾಠಿ ಬೀಸಿದ್ದಾರೆ ಎನ್ನಲಾಗಿದೆ. ಇದನ್ನು ಕೆಲವು ಪ್ರವಾಸಿಗರು ಆಕ್ಷೇಪಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಸುದ್ದಿಯಾಗಿದೆ.