ಹಿರಿಯಡ್ಕ: ತಡ ರಾತ್ರಿ ಅಕ್ರಮ ಮರಳು ಅಡ್ಡೆಗೆ ದಾಳಿ, ಮಾಲಕನ ಬಂಧನ
ಉಡುಪಿ: ಕುಕ್ಕೆಹಳ್ಳಿಯ ಪುನ್ಚರ್ ಬಳಿ ತಡರಾತ್ರಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿ ಮಾಲಕನನ್ನು ವಶಕ್ಕೆ ಪಡೆದ ಘಟನೆ ಸೋಮವಾರ ನಡೆದಿದೆ. ದೇಶವಿಡಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿದ್ದರೆ ಈ ಅಕ್ರಮ ಮರಳುಗಾರಿಕೆ ನಡೆಸುವರು ಮಾತ್ರ ಕಾನೂನನ್ನು ಗಾಳಿಗೆ ತೂರಿ ಅಕ್ರಮ ಮರಳುಗಾರಿಕೆ ನಡೆಸಿ ಲಕ್ಷಾಂತರ ರೂಪಾಯಿ ಕಮಾಯಿ ಮಾಡುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೆಲ್ಲವನ್ನು ಲೆಕ್ಕಿಸದೆ ದಕ್ಷ ಗಣಿ ಅಧಿಕಾರಿ ರಾಮ್‌ಜಿ ನಾಯ್ಕ್ ತಡ ರಾತ್ರಿ 1.30 ಗಂಟೆಗೆ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿದ್ದಾರೆ. ತನ್ನ ಜೀಪು ಚಾಲಕನೊಂದಿಗೆ ಓರ್ವರೇ ಧೈರ್ಯದಿಂದ ಹೋಗಿ ಆರೋಪಿ ಮಾಲಕನಾದ ಕೃಷ್ಣ ಪೂಜಾರಿ ಎಂಬತನನ್ನು ಬಂಧಿಸಿದ್ದಾರೆ, ಈ ಸಂದರ್ಭ ಕಾರ್ಮಿಕ ಪರಾರಿಯಾಗಿದ್ದಾನೆ.
ಶನಿವಾರ ಕುಕ್ಕೆಹಳ್ಳಿಯ ಸ್ಥಳೀಯರು ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಿದ್ದರು, ಅಂದು ರಾತ್ರಿ 11 ಗಂಟೆಗೆ ದಾಳಿ ಮಾಡಿದಾಗ ಆರೋಪಿಗಳು ಪರಾರಿಯಾಗಿದ್ದರು. ಮತ್ತೆ ಸೋಮವಾರ ಖಚಿತ ಮಾಹಿತಿ ಮೇರೆಗೆ ರಾತ್ರಿ ಬಹಳ ಧೈರ್ಯದಿಂದ ಓರ್ವರೇ ದಾಳಿ ಮಾಡಿದ ರಾಮ್‌ಜೀ ಅವರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂದರ್ಭ ಸ್ಥಳೀಯರು ಸಹಕಾರ ನೀಡಿದ್ದಾಗಿ ತಿಳಿದು ಬಂದಿದೆ.
ಈ ಹಿಂದೆ ತಡ ರಾತ್ರಿ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿಸ್ ಕುಂದಾಪುರದಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿದಾಗ ಅವರಿಗೆ ಈ ಅಕ್ರಮ ಮರಳು ದಂಧೆಯವರು ಜಿಲ್ಲಾಧಿಕಾರಿಗೆ ದಾಳಿ ಮಾಡಿದ್ದರು. ಇದೆಲ್ಲ ಮಾಹಿತಿ ಇದ್ದರೂ ತಡ ರಾತ್ರಿ ಧೈರ್ಯದಿಂದ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿದ ಗಣಿಅಧಿಕಾರಿ ಅವರ ಕಾರ್ಯವೈಖರಿ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಎಲ್ಲದರ ನಡುವೆ ಪ್ರಕರಣ ಕೈಬಿಡುವಂತೆ ರಾಜಕೀಯ ವಲಯದಲ್ಲಿ ಭಾರೀ ಒತ್ತಡ ಬರಲಾರಂಭಿಸಿದೆಂಬ ಮಾಹಿತಿ ಬರುತ್ತಿದ್ದು, ಸದ್ಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಗಣಿ ಅಧಿಕಾರಿ ದೂರು ನೀಡಿದ್ದಾರೆ.