ಆಹಾರ ಸಾಮಾಗ್ರಿಗಳಿಗೆ ಅಧಿಕ ದರ ವಸೂಲಿ: ಕ್ರಮ ಕೈಗೊಳ್ಳಲು ಗ್ರಾ.ಪಂ.ಗಳಿಗೆ ಕೋಟ ಸೂಚನೆ

ಮಂಗಳೂರು: ದಿನಸಿ ಸಾಮಗ್ರಿ, ತರಕಾರಿ ಹಣ್ಣು ಹಂಪಲುಗಳ ದರ ನಿಯಂತ್ರಣಕ್ಕೆ  ಗ್ರಾಮ  ಪಂಚಾಯತಿಗಳು ಅವಶ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಸೂಚಿಸಿದ್ದಾರೆಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು, ಸುಳ್ಯ,  ಬೆಳ್ತಂಗಡಿ ತಾಲೂಕುಗಳ  ಆಯ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ  ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡುತ್ತಿದ್ದರು. ಕೆಲವೆಡೆ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಜಾಸ್ತಿ ದರ ವಿಧಿಸಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯ ಅಂಗಡಿಗಳಲ್ಲಿ ಆಹಾರ ಸಾಮಾಗ್ರಿಗಳ ದರ  ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರು ತಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಆಶಾ ಕಾರ್ಯಕರ್ತರೊಂದಿಗೆ  ತೆರಳಿ ಪ್ರತಿಯೊಂದು ಮನೆಯ ಸದಸ್ಯರ ಆರೋಗ್ಯ ಸಮೀಕ್ಷೆ  ಮಾಡಬೇಕು. 2 ನೇ ಹಂತದ ಪರಿಶೀಲನೆ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.ಗ್ರಾಮ ಪಂಚಾಯತಿಗಳಲ್ಲಿ ಪಡಿತರ ವಿತರಣೆಯನ್ನು ಪರಿಶೀಲಿಸಿದ ಸಚಿವರು ಕಾರ್ಡ್ ಇಲ್ಲದವರಿಗೆ ಅಕ್ಕಿ ಕೊಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ತಂಡವಾಗಿ ಕೆಲಸ ಮಾಡಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಜನತಾ ಕಫ್ರ್ಯೂ ಯಶಸ್ವಿಗೊಳಿಸಲು ಪ್ರಯತ್ನಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ,  ಕುಡಿಯುವ ನೀರಿನ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು,  ಕುಡಿಯುವ ನೀರಿನ ಅಗತ್ಯ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.ಕೋರೋನ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ 20,000 ರೂ. ಅನುದಾನ ನೀಡಲಾಗಿದೆ ಇದರಲ್ಲಿ ವಿವಿಧ ಜಾಗೃತಿ ಮೂಡಿಸುವ ಕಾರ್ಯವನ್ನು ಹಾಗೂ ಆಶಾ ಕಾರ್ಯಕರ್ತರಿಗೆ ಅಗತ್ಯ ಸಾಮಾಗ್ರಿಗಳನ್ನು ನೀಡಬಹುದಾಗಿದೆ ಎಂದು ಸಚಿವರು ಹೇಳಿದರು.

ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಗೆ ಮಾಡುವುದರಿಂದ ಅಲ್ಲಿಗೆ ಬರುವ ಇತರೆ ರೋಗಿಗಳಿಗೆ ಜಿಲ್ಲೆಯ ಯಾವುದೇ ಮೆಡಕಲ್ ಕಾಲೇಜಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲಿ ಸರಕಾರದಲ್ಲಿ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,  ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಓ ಡಾ. ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!