13 ಶಾಸಕರು ಸಂಪುಟಕ್ಕೆ, 10+3 ಫಾರ್ಮುಲಾಗೆ ಹೈಕಮಾಂಡ್ ಅಸ್ತು
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಂದುಕೊಂಡಂತೆ 13 ಶಾಸಕರನ್ನು ಸಂಪುಟಕ್ಕೆ ಸೇರಿಕೊಳ್ಳಲು ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಚರ್ಚೆ ನಡೆಸಿ 10+3 ಫಾರ್ಮುಲಾಗೆ ಅಸ್ತು ಎನಿಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರ ಪೈಕಿ 10 ಶಾಸಕರಿಗೆ ಮಂತ್ರಿ ಭಾಗ್ಯ. ಇನ್ನುಳಿದಂತೆ ಮೂವರು ಮೂಲ ಬಿಜೆಪಿ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ.
ಬಿಜೆಪಿಗಾರದ ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ ಹಾಗೂ ಎಸ್ ಎ ರಾಮದಾಸ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿರುವುದರಿಂದ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರದೊಳಗೆ ತಮ್ಮ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಿಸುವ ಸಾಧ್ಯತೆಯಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದಪಡಿಸಿಕೊಂಡು ಹೋಗಿದ್ದ ಪ್ರಸ್ತಾವನೆಗೆ ಅಮಿತ್ ಶಾ, ಜೆ.ಪಿ. ನಡ್ಡಾ ಒಪ್ಪಿಗೆ ಸೂಚಿಸಿ, ಕೆಲ ಸಲಹೆ, ಸೂಚನೆ ನೀಡಿದರು ಎಂದು ತಿಳಿದುಬಂದಿದೆ.
ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಕೇಂದ್ರೀಯ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ ಎಂದರು. ಸಚಿವ ಸಂಪುಟದಲ್ಲಿರುವ ಮೂವರು ಡಿಸಿಎಂಗಳು ಮುಂದುವರಿಯಲಿದ್ದಾರೆ. ವಿಸ್ತರಣೆಯಲ್ಲಿ ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುನರುಚ್ಚರಿಸಿದರು.