ಸೈಂಟ್ ಮೇರಿಸ್ ದ್ವೀಪದಲ್ಲಿ ಹೈಫೈ ಪಾರ್ಟಿ: ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ಎಸ್ ಪಿ
ಮಲ್ಪೆ: ಜಿಲ್ಲೆಯಲ್ಲಿ ಸೆಕ್ಷನ್ 144 (3) ಜಾರಿಯಲ್ಲಿದ್ದರೂ ಶನಿವಾರ ಸೈಂಟ್ ಮೇರಿಸ್ ದ್ವೀಪದಲ್ಲಿ ಅನಧಿಕೃತವಾಗಿ ತಂಗಿ ಪಾರ್ಟಿ ಮಾಡಿದ್ದ ಆರೋಪಿಗಳಾದ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ನಿರ್ವಾಹಕ ಸುದೇಶ್ ಶೆಟಿ ಕುಕ್ಕಿಕಟ್ಟೆ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ವೈ ಕುಮಾರ್, ದೇವಾನಂದ, ನಂದಕಿಶೋರ ಕೆ.ಆರ್, ಪಾಂಡುರಂಗ ಪಿ ಕುಂದರ್, ಸಚೀನ್ ಹಾಗೂ ರಾಘವ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.
ನಿರ್ಬಂದಿತ ಪ್ರದೇಶದಲ್ಲಿ ಅಕ್ರಮವಾಗಿ ವಾಸ್ಥವ್ಯ ಕುರಿತು ಸ್ಥಳೀಯ ವಡಬಾಂಡೇಶ್ವರ ನಗರಸಭಾ ಸದಸ್ಯ ಯೋಗಿಶ್ ಸಾಲಿಯಾನ್ ದೂರಿನಂತೆ ಕೂಡಲೇ ಕಾರ್ಯಪ್ರವೃತ್ತರಾದ ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ಇಂಟರ್‌ಸೆಪ್ಟರ್ ಗಸ್ತು ಬೋಟಿನಲ್ಲಿ ಮಲ್ಪೆ ಸಿ.ಎಸ್.ಪಿ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಸೈಂಟ್ ಮೇರಿಸ್ ದ್ವೀಪಕ್ಕೆ ತಡರಾತ್ರಿ ಹೋಗಿ ಪರಿಶೀಲನೆ ನಡೆಸಿದಾಗ, ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ವಿಠೋಬ ಎಂಬ ಹೆಸರಿನ ಬೋಟಿನಲ್ಲಿ ಬಂದು ರಾತ್ರಿ ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಪಾರ್ಟಿ ಮಾಡಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಆರೋಪಿಗಳನ್ನು ಸಿ.ಎಸ್.ಪಿ ಠಾಣೆಗೆ ಕರೆತಂದು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಇವರು ಮಲ್ಪೆ ಅಭಿವೃದ್ದಿ ಸಮಿತಿಯ ಟೆಂಡರ್ ನಿಯಮಗಳ ಉಲ್ಲಂಘನೆಯ ಹಾಗೂ ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಅಲ್ಲಿ ತಂಗಿ ಕಾನೂನು ಉಲ್ಲಂಘಿಸಿದ್ದರಿಂದ ಮಲ್ಪೆ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಉಡುಪಿ ಜಿಲ್ಲಾಧಿಕಾರಿಯವರಿಗೆ ಈ ಕುರಿತು ಕ್ರಮಕೈಗೊಳ್ಳುವಂತೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರಾದ ಚೇತನ್ ಆರ್. ವರದಿ ಸಲ್ಲಿಸಿರುತ್ತಾರೆ.
ಈ ಭಾಗದ ಜನ ಪ್ರತಿನಿಧಿಯಾಗಿ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ, ತಡರಾತ್ರಿಯಾದರೂ ನಾನೂ ಕೂಡ ಕರಾವಳಿ ಕಾವಲು ಪೊಲೀಸರೊಂದಿಗೆ ಐಲ್ಯಾಂಡ್‌ಗೆ ಹೋಗಿದ್ದೆ. ಅಲ್ಲಿ ಇದ್ದ ಹೆಚ್ಚಿನವರು ಪಾರ್ಟಿ ಮುಗಿಸಿ ಮಲಗಿದ್ದ ಪರಿಸ್ಥಿತಿಯಲ್ಲಿದ್ದರು. ಸ್ಥಳದಲ್ಲಿ ಅನ್ನ , ಮಾಂಸಹಾರ, ಐಸ್ ಬಾಕ್ಸ್, ಕೆಲವೊಂದು ಪಾನಿಯಾದ ಕ್ಯಾಪ್ ಇತ್ತು ಎಂದು ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ “ಉಡುಪಿ ಟೈಮ್ಸ್”ಗೆ ತಿಳಿಸಿದರು.