ಭಾರಿ ಮಳೆ :ಚಾರ್ಮಡಿ ಘಾಟಿಯ ಗುಡ್ಡ ಕುಸಿತ ವಾಹನ ಸಂಚಾರಕ್ಕೆ ಅಡಚಣೆ

ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ ತಾಲ್ಲೂಕಿನಲ್ಲಿ ಶನಿವಾರ ಭಾರಿ ಮಳೆಯಾಗುತ್ತಿದೆ. ಚಾರ್ಮಡಿ ಘಾಟಿಯ ಅಲೇಖಾನ್ ಬಳಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ. ಅಲೇಖಾನ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.

ಮಳೆ ಬಿರುಸಾಗಿರುವುದರಿಂದ ಹೇಮಾವತಿ ನದಿ ಹರಿವು ಹೆಚ್ಚಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರಕ್ಷಿತಾರಣ್ಯದಲ್ಲಿ ಮಳೆ ಮುಸುಕು ಹೊದ್ದ ಬೆಟ್ಟ ಗುಡ್ಡಗಳು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿವೆ.

ಚಂಚೋಳಿಯಲ್ಲಿ ಮನೆಗಳಿಗೆ ಹಾನಿ: ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಪಟ್ಟಣದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಪುರಸಭೆ ವ್ಯಾಪ್ತಿಯ ಚಂದಾಪುರ ಮಾರ್ಗದ ಮುಖ್ಯರಸ್ತೆಯಲ್ಲಿರುವ ಪದ್ಮಾ ಪದವಿ ಪೂರ್ವ ಕಾಲೇಜು ಬಳಿಯ ಮಹೇಶ ಸಜ್ಜನ್ ಅವರ ಮನೆಯ ಗೋಡೆ ನಸುಕಿನ 5 ಗಂಟೆ ಸುಮಾರಿಗೆ ಉರುಳಿದೆ. ಆಗ ಕಲ್ಲುಗಳು ಉರುಳಿದ ಸದ್ದು ಬಂದಿದ್ದು ಮನೆಯವರು ಹೊರಗಡೆ ಓಡಿ ಬಂದಿದ್ದೇವೆ. ಆಗ ಅಕ್ಕಪಕ್ಕದವರು ಬಂದು ನೋಡಿದಾಗ ಮನೆಯ ಗೋಡೆ ಉರುಳಿತ್ತು. ನಾವು ಪಕ್ಕದ ಕೋಣೆಯಲ್ಲಿ ಮಲಗಿದ್ದೆವು ಎಂದು ಮಹೇಶ ಸಜ್ಜನ್ ತಿಳಿಸಿದರು.

ಪಟ್ಟಣದ ಕಲ್ಯಾಣ ಗಡ್ಡಿಯಲ್ಲಿರುವ ರಾಜಪ್ಪ ಮಲಿ ಅವರ ಮನೆಯ ಮಳೆಯಿಂದ ಉರುಳಿದೆ . ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯ ಗೋಡೆಯ ಒಂದು ಭಾಗ ಧರೆಗುರುಳಿದೆ. ಮನೆಗಳಿಗೆ ಹಾನಿ ಉಂಟಾಗಿರುವ ಸ್ಥಳಗಳಿಗೆ ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಚಿಂಚೋಳಿಯಲ್ಲಿ‌ 40 ಮಿ.ಮೀ ಮಳೆಯಾಗಿದೆ.

Leave a Reply

Your email address will not be published. Required fields are marked *

error: Content is protected !!