ಹಾಲಾಡಿ: ಶಾಲಿನಿ ಜಿ. ಶಂಕರ್ ಕನ್‌ವೆನ್ಶನ್ ಸೆಂಟರ್ ಲೋಕಾರ್ಪಣೆ
ಉಡುಪಿ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಕುಟುಂಬಿಕರು ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಿದ ಶಾಲಿನಿ ಜಿ. ಶಂಕರ್ ಕನ್‌ವೆನ್ಶನ್ ಸೆಂಟರ್ ಸೋಮವಾರ ಉದ್ಘಾಟನೆಗೊಂಡಿತು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಉದ್ಘಾಟಿಸಿ, ಹಾಲಾಡಿಯಂಥ ಗ್ರಾಮೀಣ ಪ್ರದೇಶದ ಜನತೆಗೆ ಗುಣಮಟ್ಟದ ಸೇವೆ ನೀಡುವಲ್ಲಿ ಶ್ರಮಿಸಿದ ಡಾ| ಜಿ. ಶಂಕರ್ ಅವರ ಬಡಜನತೆಯ ಪರ ಕಾಳಜಿ ಇತರರಿಗೆ ಮಾದರಿ. ತನ್ನ ಗಳಿಕೆಯ ಬಹುಪಾಲನ್ನು ಸಮಾಜಸೇವೆಗಾಗಿ ವಿನಿಯೋಗಿಸುವ ಅವರು ಆರೋಗ್ಯ, ಶಿಕ್ಷಣ ಮತ್ತು ಸಮಾಜಸೇವೆ ನಿರಂತರ ಸಲ್ಲಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಅಭ್ಯಾಗತರಾಗಿದ್ದ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್‍ಯ ಶುಭಾಶಂಸನೆಗೈದು, ಸಮಾಜದಲ್ಲಿ ಹಣವುಳ್ಳವರು ಅನೇಕರಿರಬಹುದು. ಆದರೆ, ಸಮಾಜಸೇವೆಗಾಗಿ ಅದನ್ನು ವಿನಿಯೋಗಿಸುವವರು ಕಡಿಮೆ. ಅಂಥ ವಿರಳಾತಿವಿರಳರಲ್ಲಿ ಡಾ| ಜಿ. ಶಂಕರ್ ಅಗ್ರಗಣ್ಯರು. ಅವರ ಬಹುಮುಖೀ ಸಮಾಜಸೇವೆ ಇತರರಿಗೆ ಮಾದರಿ ಎಂದರು.
ಅರ್ಚಕ ವಿಘ್ನರಾಜ ಭಟ್, ಉದ್ಯಮಿ ಭುವನೇಂದ್ರ ಕಿದಿಯೂರು, ಬಗ್ವಾಡಿ ಮೊಗವೀರ ಹೋಬಳಿ ಅಧ್ಯಕ್ಷ ಕೆ. ಕೆ. ಕಾಂಚನ್, ಬಾರ್ಕೂರು ಹೋಬಳಿಯ ಸತೀಶ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಂ ಶುಭ ಹಾರೈಸಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥರಾದ ಶಾಲಿನಿ ಶಂಕರ್, ಶ್ಯಾಮಿಲಿ ನವೀನ್, ನವೀನಕುಮಾರ್, ಆನಂದ ಎಸ್. ಕೆ., ಶಂಕರ ಸಾಲ್ಯಾನ್, ಶಿವಣ್ಣ, ವಸಂತಿ ಶಿವಣ್ಣ ಮೊದಲಾದವರಿದ್ದರು.
ಎಲ್ಲ ವರ್ಗದವರಿಗೂ ನೆರವು:
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಜಿ. ಶಂಕರ್, ಈಗಾಗಲೇ ಉಡುಪಿ ಮತ್ತು ಬ್ರಹ್ಮಾವರಗಳಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸುವ ಮೂಲಕ ಸಾಮಾನ್ಯ ಜನತೆಯ ಶುಭಶೋಭನಾದಿಗಳಿಗೆ ಪೂರಕವಾಗಿ ಕೈಗೆಟಕುವ ದರದಲ್ಲಿ ಸಭಾಂಗಣ ನೀಡಲಾಗುತ್ತಿದ್ದು, ಇದೀಗ ಗ್ರಾಮೀಣ ಪ್ರದೇಶವಾದ ಹಾಲಾಡಿಯಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸುವ ಮೂಲಕ ಗ್ರಾಮೀಣ ಪ್ರದೇಶದ ಜನತೆಯೂ ನಗರ ಪ್ರದೇಶದ ಸೌಕರ್‍ಯ ಪಡೆಯುವಂತಾಗಬೇಕು ಎಂಬ ಆಶಯ ಹೊಂದಲಾಗಿದೆ.
ಎಲ್ಲ ವರ್ಗದ ಜನತೆಗೂ ಈ ಸಭಾಂಗಣ ಮುಕ್ತವಾಗಿದ್ದು, ಸಾಮೂಹಿಕ ವಿವಾಹದಂಥ ಕಾರ್‍ಯಕ್ರಮಗಳಿಗೆ ಸಭಾಂಗಣವನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಗಣೇಶ ಕಾಂಚನ್ ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭದಲ್ಲಿ ಶಿವಣ್ಣ ಹಾಗೂ ಶಂಕರ ಮೊಗವೀರ ಹಾಲಾಡಿ ಅವರನ್ನು ಗೌರವಿಸಲಾಯಿತು.