ಎಚ್.ವಿಶ್ವನಾಥ್ ವಿರುದ್ಧ ಕೆಂಡಾಮಂಡಲವಾದ:ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ಮಂಗಳವಾರ ವಿಧಾನಸಭಾ ಕಲಾಪದಲ್ಲಿ ನಡೆಯಿತು.

ಸಿಎಂ ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಭಾಷಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಎಚ್.ವಿಶ್ವನಾಥ್ ಅವರು ನಮ್ಮ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅವರು ಬರುತ್ತಿದ್ದೇವೆ ಅಂತ ಮೊದಲು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರನ್ನು ನೋಡಲು ಜಯದೇವ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿದ್ದ ಕಚೇರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡುವಂತೆ ಸೂಚನೆ ನೀಡಿದೆ. ಆದರೆ ಅವರು ನೇರವಾಗಿ ಸುಪ್ರೀಂಕೋರ್ಟಿಗೆ ಹೋದರು ಎಂದು ಕಿಡಿಕಾರಿದರು.

ಸುಪ್ರೀಂಕೋರ್ಟ್ ಆದೇಶದ ಬಳಿಕ ಎಚ್.ವಿಶ್ವನಾಥ್ ಅವರು ಬಂದು ರಾಜೀನಾಮೆ ನೀಡಿದರು. ಈ ದೃಶ್ಯವನ್ನು ನಾನು ವಿಡಿಯೋ ಕೂಡ ಮಾಡಿಸಿದ್ದೇನೆ. ರಾಜೀನಾಮೆ ಪತ್ರದ ಹೇಗಿರಬೇಕು ಅಂತ ತಿಳಿ ಹೇಳಿದ್ದೇನೆ. ಆದರೂ ಅವರು ಉದ್ದೇಶ ಅದೇ ಎಂದು ಸರಳವಾಗಿ ಹೇಳಿಬಿಟ್ಟರು ಎಂದು ಅಸಮಾಧಾನ ಹೊರ ಹಾಕಿದರು

ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ, ವಿಧಾನಸಭಾ ಸದಸ್ಯ ಸೇರಿದಂತೆ ಅನೇಕ ಸ್ಥಾನಗಳನ್ನ ಅಲಂಕರಿಸಿದ್ದಾರೆ. ಆದರೂ ಅವರಿಗೆ ರಾಜೀನಾಮೆ ನೀಡುವುದು ಗೊತ್ತಿಲ್ಲವೇ? ಒಂದು ವೇಳೆ ರಾಜೀನಾಮೆ ಕೊಡುವ ನಿಯಮ ತಿಳಿದಿದ್ದರೆ ಯಾವ ಉದ್ದೇಶಕ್ಕಾಗಿ ಹಾಗೆ ಮಾಡಿದರು ಎನ್ನುವ ಅನುಮಾನ ಬರುತ್ತದೆ. ಇಂತಹ ವ್ಯಕ್ತಿ ಈಗ ಸ್ಪೀಕರ್ ಕುಮ್ಮಕ್ಕು ಕೊಡುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ನನ್ನಂತೆ ಬದುಕಲು ಅವರು ನೂರು ಜನ್ಮ ಪಡೆಯಬೇಕು ಎಂದು ವಿಶ್ವನಾಥ್ ಅವರ ವಿರುದ್ಧ ಚಾಟಿ ಬೀಸಿದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅನುಗ್ರಹದಿಂದ ನಾವು ವಿಧಾನಸಭೆಗೆ ಕಾಲಿಟ್ಟಿದ್ದೇವು. ನನ್ನ ಕ್ಷೇತ್ರದಲ್ಲಿ ನನಗೆ ಜಾತಿಯ ಬೆಂಬಲವಿಲ್ಲ. ಹಣ ಎಷ್ಟಿದೆ ಅಂತ ದೇಶದ ಜನರಿಗೆ ಗೊತ್ತಿದೆ. ಅವಕಾಶ ಸಿಕ್ಕಾಗ ಡಿ.ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಹಾಕಿದ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ ಎಂದು ಹೇಳಿದರು.

ರಾಜೀನಾಮೆ ಕೊಡುವ ನಿಯಮದ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನಾನು ಈ ಸ್ಥಾನದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಮಾತನಾಡಿರುವುದು ಸಭಾ ನಿಂದನೆ ಎಂದು ಗುಡುಗಿದರು.

ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದೇನೆ ಎಂದು ಹೇಳಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪತ್ರವನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡುವಂತೆ ಸಿಬ್ಬಂದಿಯನ್ನು ಕರೆದರು. ಬಳಿಕ ಮಾತು ಮುಂದುವರಿಸಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಒಂದೇ ಕ್ಷಣವೂ ಇರಲ್ಲ. ಅದಕ್ಕಾಗಿಯೇ ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಕೆ.ಎಚ್.ರಂಗನಾಥ್ ಅವರ ಕೈಯಲ್ಲಿ ಬೆಳೆದಿದ್ದೇನೆ. ಅವರು ನನಗೆ ರಾಜಕೀಯ ಸಂಸ್ಕಾರ ನೀಡಿದ್ದಾರೆ ಎಂದರು

Leave a Reply

Your email address will not be published. Required fields are marked *

error: Content is protected !!