ಶಿಕ್ಷಕರ ಒತ್ತಡ ರಹಿತ ಕೆಲಸಕ್ಕೆ ಸರಕಾರ ಬದ್ಧ:ಕೋಟ

ಉಡುಪಿ: ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ, ಉತ್ತಮ ನಾಗರಿಕ ಸಮಾಜವನ್ನು ಸೃಷ್ಟಿಸುವ ಶಿಕ್ಷಕರಲ್ಲಿ ಒತ್ತಡ ರಹಿತವಾಗಿ ನಿರಾಳತೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕಾದ ಅವಶ್ಯವಿದೆ. ಅದಕ್ಕಾಗಿ ಕಡ್ಡಾಯ ವರ್ಗಾವಣೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತಂದು ಇರುವ ಗೊಂದಲ ನಿವಾರಿಸಲು ಸರಕಾರ ಬದ್ಧವಾಗಿದೆ ಎಂದು ಮುಜುರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ಅವರು ಆದರ್ಶ ಆಸ್ಪತ್ರೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದು, 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಬಿಸಿಯೂಟ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಾಥಮಿಕ ಹಂತದಿಂದ ಪದವಿ ಶಿಕ್ಷಣದ ತನಕವೂ ಮಕ್ಕಳಿಗೆ ವಿದ್ಯೆ, ಬುದ್ಧಿ ನೀಡುವ ಶಿಕ್ಷಕರಿಗೆ ಗೌರವಯುತ ಸ್ಥಾನಮಾನ, ನೆಮ್ಮದಿ ವಾತಾವರಣ ಕಲ್ಪಿಸಬೇಕಾದ ಅವಶ್ಯವಿದೆ ಎಂದರು.
ರಾಜ್ಯದ ಒಟ್ಟು ಶಿಕ್ಷಕರಲ್ಲಿ ಶೇ. 60 ರಿಂದ 65 ರಷ್ಟು ಮಹಿಳಾ ಶಿಕ್ಷಕರಿದ್ದು, ಕಡ್ಡಾಯ ವರ್ಗಾವಣೆಯಿಂದಾಗಿ ಶಿಕ್ಷಕರ ಮಾನಸಿಕ ಒತ್ತಡ ಹೆಚ್ಚಿ ನೋವಿನಿಂದ ಕೆಲಸ ಮಾಡುವಂತಾಗಿದೆ. ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆಲಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಇಲಾಖಾ ಸಚಿವರು ಕಾರ್ಯಪ್ರವೃತ್ತರಾಗುವ ಸಂಪೂರ್ಣ ವಿಶ್ವಾಸವಿದೆ. ಈ ಬಗ್ಗೆ ಶಿಕ್ಷಕರು ಚಿಂತಿಸಬೇಕಾಗಿಲ್ಲ ಎಂದರು.


ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ ದೇಶದ ಬದಲಾವಣೆಗೆ ಮಕ್ಕಳ ಪಾತ್ರ ಹೆಚ್ಚಿದೆ, ಆದ್ದರಿಂದ ಮಕ್ಕಳ ಜವಾಬ್ದಾರಿ ,ಅವರು ಮಾಡುವ ತಪ್ಪುಗಳನ್ನು ತಿದ್ದಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು.


ಸನ್ಮಾನ: ಬೈಂದೂರು ವಲಯದಿಂದ ಕೆ. ರಾಮಣ್ಣ ನಾಯ್ಕ್, ಸೀತಾರಾಮ ಶೆಟ್ಟಿ, ಶಂಕರ ಶಿರೂರು, ಸಂತೋಷ್ ಭಂಡಾರಿ, ಪ್ರದೀಪ್ ಕುಮಾರ್ ಪಿ., ವೇದಾವತಿ, ಕುಂದಾಪುರ ವಲಯದಿಂದ ಸೀತಾಲಕ್ಷ್ಮೀ, ಕಿರಣ ಕುಮಾರ್ ಬಿ., ಚಿದಾನಂದ, ಶುಭಾ ಶೇಟ್, ಬಿ. ಉದಯ ಕುಮಾರ್ ಹೆಗ್ಡೆ, ಮಹಾಬಲೇಶ್ವರ ಚಿದಂಬರಂ ಭಾಗ್ವತ್.

ಬ್ರಹ್ಮಾವರ ವಲಯದಿಂದ ಜಿ. ಉದಯ ಮಯ್ಯ, ಮಂಜುನಾಥ ನಾಯ್ಕ್ ಚಾಂತಾರು, ಅಭಿಲಾಷಾ ಎಸ್., ವತ್ಸಲಾ, ಕೆ. ಕಿರಣ ಹೆಗ್ಡೆ, ಭಾಸ್ಕರ ಪೂಜಾರಿ, ಕಾರ್ಕಳ ವಲಯದಿಂದ ಸುಧಾಕರ ಶೆಟ್ಟಿ, ಲಕ್ಷ್ಮಣ್ ಸಾಲ್ವಂಕಾರ್, ಪೃಥ್ವಿರಾಜ್ ಬಲ್ಲಾಳ್, ಶಿವಪ್ರಸಾದ್ ಅಡಿಗ ಎಸ್., ಡಾ. ಕಾಂತಿ ಹರೀಶ್, ವಿನಯಾ.

ಉಡುಪಿ ವಲಯದಿಂದ ಹೆಲೆನ್ ವಿಕ್ಟೋರಿಯಾ ಸಾಲಿನ್ಸ್, ಶಕುಂತಳಾ ದೇವಿ, ಶೈಲಿ ಪ್ರೇಮಾ ಕುಮಾರಿ, ಜ್ಯೋತಿ ಲತಾ ಲೋಬೊ, ಸವಿತಾ ಎಸ್., ಸೌಮ್ಯ ಅಮೀನ್ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಖ ಶೇಷಶಯನ ಕಾರಿಂಜ ಮಾತನಾಡಿದರು.


ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ.ಎನ್.ಆರ್. ರಾವ್, ನರರೋಗ ತಜ್ಞ ಎ. ರಾಜಾ, ಹಿರಿಯ ಆಯುರ್ವೇದ ತಜ್ಞ ಡಾ.ಟಿ. ಶ್ರೀಧರ ಭಾಯರಿ, ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

1 thought on “ಶಿಕ್ಷಕರ ಒತ್ತಡ ರಹಿತ ಕೆಲಸಕ್ಕೆ ಸರಕಾರ ಬದ್ಧ:ಕೋಟ

Leave a Reply

Your email address will not be published. Required fields are marked *

error: Content is protected !!