ಅಸ್ತಂಗತರಾದ ಕೃಷ್ಣ ಪ್ರಿಯನಿಗೆ ಸರಕಾರಿ ಗೌರವ
ಬೆಂಗಳೂರು: ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಪಾರ್ಥಿವ ಶರೀರಕ್ಕೆ ವಿದ್ಯಾಪೀಠದಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ, ಸಿರಿಗೆರೆ ಮಠದ ಶ್ರೀಗಳು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.
ಮಾಧ್ವ ಪರಂಪರೆಗೆ ಅನುಗುಣವಾಗಿ ಅಂತಿಮ ವಿಧಿವಿಧಾನಗಳು ನಡೆಯಿತು.
ವಿಶ್ವೇಶ ತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಚಾರ್ಯ ಕೃಷ್ಣರಾಜ ಕುತ್ಪಾಡಿ ಧಾರ್ಮಿಕ ವಿಧಿಗಳ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಂಜೆ ಅನೇಕ ಗಣ್ಯರು ಸೇರಿದಂತೆ ನೂರಾರು ಭಕ್ತರು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪೇಜಾವರ ವಿಶ್ವೇಶ ತೀರ್ಥರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದಿದ್ದಾರೆ
ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಮೂಲಕ ಭಕ್ತರು ಅಂತಿಮ ನಮನ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೇಜಾವರ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶ್ರೀಗಳ ಪಾರ್ಥಿವ ಶರೀರಕ್ಕೆ ತುಳಸಿ ಹಾರ ಹಾಕಿ ಗೌರವ ಸಮರ್ಪಿಸಿದ್ದಾರೆ.
ಶ್ರೀಗಳ ಪಾರ್ಥಿವ ಶರೀರಕ್ಕೆ ತುಳಸಿ ಹಾರ ಹಾಕಿ ಗೌರವ ಸಮರ್ಪಿಸಿದ ಬಿಎಸ್‌ವೈ
ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್, ರಾಮಲಿಂಗಾರೆಡ್ಡಿ, ಸಚಿವರಾದ ವಿ.ಸೋಮಣ್ಣ, ಕೆ.ಎಸ್. ಈಶ್ವರಪ್ಪ, ಕನಕ ಗುರುಪೀಠದ ಸ್ವಾಮೀಜಿ, ಪಿಜಿಆರ್ ಸಿಂಧ್ಯ, ನಟ ಶ್ರೀನಾಥ್, ಅವಿನಾಶ್, ಮಾಳವಿಕ ಅವಿನಾಶ್ ಸೇರಿದಂತೆ ಹಲವು ಗಣ್ಯರು ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸುಮಾರು 2 ಗಂಟೆ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.