ಅತ್ತೂರು ಚರ್ಚ್‌ನಿಂದ ಸರಕಾರಿ ಜಮೀನಿನು ಅತಿಕ್ರಮಣ: ಜಿಲ್ಲಾಧಿಕಾರಿಗೆ ದೂರು
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಚರ್ಚ್‌ನ ಆಡಳಿತ ಮಂಡಳಿ 70 ಎಕ್ರೆಗೂ ಅಧಿಕ ಸರಕಾರಿ ಜಮೀನಿನನ್ನು ಅತಿಕ್ರಮಿಸಿಕೊಂಡಿರುವ ಬಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ. ಸರಕಾರಿ ಜಮೀನು ಒತ್ತುವರಿ ಮಾಡಿ ಅರಣ್ಯ ನಾಶ ಮಾಡಿ ಲಕ್ಷಾಂತರ ಮೌಲ್ಯದ ಮರಮಟ್ಟುಗಳನ್ನು ಕಳ್ಳ ಸಾಗಣೆ ಮಾಡಿದ್ದು ಇದರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕುಂದು ಆಗ್ರಹಿಸಿದೆ.
.
ನಿಟ್ಟೆ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕೆ ನಿರ್ಮಾಣಗೊಂಡಿದ್ದ ರಸ್ತೆಯನ್ನು ನಾಶಪಡಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಲಾಗಿದೆ. ಅಷ್ಟೇ ಅಲ್ಲದೆ ಗುಡ್ಡಕ್ಕೆ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಕಳೆದ ಹಲವಾರು ಸಮಯದಿಂದ ನಡೆಯುತ್ತಿರುವ ಭಾರಿ ಪ್ರಮಾಣದ ಗುಡ್ಡ ಸಮತಟ್ಟು ಕಾರ್ಯದಿಂದಾಗಿ ಅಕ್ಕಪಕ್ಕದ 500 ಕ್ಕೂ ಅಧಿಕ ಎಕರೆ ಕೃಷಿಭೂಮಿ ನಾಶವಾಗಿದೆ. ಕಳೆದ ಮಳೆಗಾಲದಲ್ಲಿ ಗುಡ್ಡದ ಮೇಲಿನಿಂದ ಹೂಳು ಮಿಶ್ರಿತ ಕೆಸರು ನೀರು ತುಂಬಿ ಸ್ಥಳೀಯರ ಎಕ್ರೆಗಟ್ಟಲೆ ಕೃಷಿ ಭೂಮಿ ಹಾಳಾಗಿವೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದರು ಏನೂ ಪ್ರಯೋಜನವಾಗಿಲ್ಲ.
ವರ್ಷದ ಹಿಂದೆ ನಿಟ್ಟೆ ಪಂಚಾಯತ್ ಅರಣ್ಯ ಇಲಾಖೆಗೆ ಮಾಡಿದ ಮನವಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಈ ಒತ್ತುವರಿಯಾದ ಪ್ರದೇಶ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ ಅದು ಕಂದಾಯ ಭೂಮಿ ಎಂದು ತಿಳಿಸಿದ್ದಾರೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಗೆ ಅತಿಕ್ರಮಿತ ಭೂಮಿಯ ಸರ್ವೆ ಆದೇಶವನ್ನು ಮಾಡಿ ಸರಕಾರಿ ಭೂಮಿಯನ್ನು ರಕ್ಷಿಸಬೇಕು ಮತ್ತು ಚರ್ಚ್ ನಡೆಸಿರುವ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ, ಭೂ ಒತ್ತುವರಿ ಮತ್ತು ಪ್ರಕೃತಿ ನಾಶ ಮಾಡಿರುವುದರ ವಿರುದ್ಧ 15ದಿನದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದು ಹಿತರಕ್ಷಣಾ ಸಮಿತಿಯಿಂದ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಎಚ್ಚರಿಸಲಾಗಿದೆ.
ಹಿಂದೂ ಹಿತರಕ್ಷಣಾ ಸಮಿತಿಯ ಕಾರ್ಕಳ ಅಧ್ಯಕ್ಷ ರತ್ನಾಕರ್ ಅಮೀನ್, ಕಾರ್ಯದರ್ಶಿ ರಮೇಶ ಕಲ್ಲೊಟ್ಟೆ ಈ ಸಂದರ್ಭ ಉಪಸ್ಥಿತರಿದ್ದರು.