ಸಹಕಾರಿ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಶ್ರೀನಿವಾಸ ಪೂಜಾರಿ

ಉಡುಪಿ:ಸಹಕಾರಿ ಕ್ಷೇತ್ರ ಎಂದರೆ ಜನರಿಂದ ಜನರಿಗೋಸ್ಕರ ಇರುವ ವ್ಯವಸ್ಥೆ. ಪ್ರಸ್ತುತ ಸಹಕಾರಿ ಸಂಘಗಳು ಅನೇಕ ಸಮಸ್ಯೆ, ಆತಂಕಗಳನ್ನು ಎದುರಿಸುತ್ತಿರಬಹುದು. ಆದರೆ ಒಬ್ಬ ಒಳ್ಳೆಯ ಪಾವತಿದಾರ ಬೆಳಿಗ್ಗೆ ಕೊಟ್ಟ ಅರ್ಜಿಗೆ ಸಂಜೆಯೊಳಗೆ ಸಾಲ ಮಂಜೂರು ಮಾಡುವ ಸಾಮರ್ಥ್ಯ ಇರುವುದು ಸಹಕಾರಿ ಸಂಘಗಳಿಗೆ ಮಾತ್ರ ಎಂದು ಬಂದರು ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಭಾನುವಾರ ನಡೆದ ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದಾಖಲೆಗಳ ಆಧಾರದಲ್ಲಿ ವ್ಯವಹಾರ ನಡೆಯುತ್ತದೆ. ಆದರೆ ಸಹಕಾರಿ ಸಂಘಗಳಲ್ಲಿ ಗ್ರಾಹಕರು ಅಥವಾ ಸದಸ್ಯರು ಸಂಘದ ಜತೆಗೆ ಹೊಂದಿರುವ ವ್ಯವಹಾರಿಕ
ಸಂಬಂಧಗಳ ಆಧಾರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕ ರಂಗದಲ್ಲಿ ಸಹಕಾರಿ ಹಾಸುಹೊಕ್ಕಾಗಿದೆ. ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಬ್ಯಾಂಕಿಂಗ್‌ ಕ್ಷೇತ್ರದ ತೊಟ್ಟಿಲು 1969ರಲ್ಲಿ ಇಂದಿರಾ ಗಾಂಧಿಯವರು 14 ಬ್ಯಾಂಕ್‌ಗಳನ್ನು ರಾಷ್ಟ್ರೀಕೃತಗೊಳಿಸಿದ್ದರು. ಆ 14 ಬ್ಯಾಂಕ್‌ಗಳ ಪೈಕಿ 4 ಬ್ಯಾಂಕ್‌ಗಳನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಆ ಮೂಲಕ ನಮ್ಮ ಜಿಲ್ಲೆ ಬ್ಯಾಂಕಿಂಗ್‌ ಕ್ಷೇತ್ರದ ತೊಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕಿಂಗ್‌ ವಿಲೀನ ಪ್ರಕ್ರಿಯೆಯಿಂದ ವಿಜಯ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳನ್ನು ಕಳೆದುಕೊಂಡಿದ್ದೇವೆ. ಕಾರ್ಪೋರೇಶನ್‌ ಹಾಗೂ ಕೆನರಾ ಬ್ಯಾಂಕ್‌ಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ಇದು ನಮಗೆ ದುಃಖಕರವಾದ ಸಂಗತಿ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.


ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಒಂದು ಸಂಸ್ಥೆಗೆ ವರ್ಷಗಳು ಕಳೆದಂತೆ ಅದರ ಪರಿಪಕ್ವತೆ ಹೆಚ್ಚಾಗುತ್ತದೆ. ಬಡಗಬೆಟ್ಟು ಸೊಸೈಟಿಯ ಯಶಸ್ಸಿನಲ್ಲಿ ಜನರ ಪಾತ್ರ ಹಾಗೂ ಸೊಸೈಟಿಯ ಆಡಳಿತ ವರ್ಗದ ಪರಿಶ್ರಮ ಮಹತ್ತರವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೊಡಲು ಹಲವಾರು ಷರತ್ತುಗಳನ್ನು ವಿಧಿಸುತ್ತದೆ. ಆದರೆ ಸಹಕಾರಿ ಸಂಘಗಳು ಜನರಿಗೆ ಬೇಡಿಕೆಗೆ ಕೂಡಲೇ ಸ್ಪಂದಿಸುತ್ತದೆ ಎಂದರು.
ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಸಣ್ಣ ಮೊತ್ತದಲ್ಲಿ ಆರಂಭಗೊಂಡ ಬಡಗಬೆಟ್ಟು ಸೊಸೈಟಿ ಇಂದು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಇದು ಮುಂದಿನ ದಿನಗಳಲ್ಲಿ ಬ್ಯಾಂಕ್‌ ಆಗಿ ಪರಿವರ್ತನೆಗೊಳ್ಳಲಿ. ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಹಾರೈಸಿದರು.


ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ
ಸ್ಪರ್ಧೆಯೊಡ್ಡುವ ಶಕ್ತಿ ಯಾವುದಾದರೂ ಸಂಸ್ಥೆಗೆ ಇದ್ದರೆ, ಅದು ಬಡಗಬೆಟ್ಟು ಸೊಸೈಟಿಗೆ
ಮಾತ್ರ. ಬ್ಯಾಂಕ್‌ಗಳು ಇಲ್ಲದ ಜಿಲ್ಲೆಯಲ್ಲಿ ಇಂತಹ ಸಂಸ್ಥೆಗಳನ್ನು ಕಟ್ಟುವುದು ದೊಡ್ಡ
ವಿಷಯವಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ತವರೂರಲ್ಲಿ ಒಂದು ಸಂಸ್ಥೆಯನ್ನು ನೂರು ವರ್ಷ ಮುನ್ನಡೆಸಿಕೊಂಡು ಬರುವುದು ಬಹಳ ಸವಾಲಿನ ಕೆಲಸ ಎಂದರು.
ಆಡಳಿತ ಮಂಡಳಿ ಮತ್ತು ಸಾಲಗಾರರ ಪ್ರಾಮಾಣಿಕತೆ, ಸಿಬ್ಬಂದಿ ವರ್ಗದ ಬದ್ಧತೆ ಹಾಗೂ
ಠೇವಣಿದಾರರ ವಿಶ್ವಾಸವಿದ್ದರೆ, ಬ್ಯಾಂಕಿಂಗ್‌ ಸಂಸ್ಥೆಯನ್ನು ಯಶಸ್ವಿಯಾಗಿ
ಮುನ್ನಡೆಸಲು ಸಾಧ್ಯ ಎಂಬುವುದನ್ನು ಬಡಗಬೆಟ್ಟು ಸೊಸೈಟಿ ತೋರಿಸಿಕೊಟ್ಟಿದೆ ಎಂದು
ಹೇಳಿದರು.


ಸಿಎಸ್‌ಐ ಜುಬಿಲಿ ಚರ್ಚ್‌ನ ಸಭಾ ಪಾಲಕ ಕಿಶೋರ್‌ ಕುಮಾರ್‌, ಎಸ್‌ಎಸ್‌ಎಫ್‌ ರಾಜ್ಯ
ಕಾರ್ಯದರ್ಶಿ ಮೊಹಮ್ಮದ್‌ ಆಶ್ರಫ್‌ ಅಂಜದಿ ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌. ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಟಿಎಂಎ ಪೈ ಫೌಂಡೇಶನ್‌ ಕಾರ್ಯದರ್ಶಿ ಟಿ. ಅಶೋಕ್‌ ಪೈ, ದ.ಕ. ಸಹಕಾರಿ ಹಾಲು
ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕ
ಪ್ರವೀಣ್‌ ಬಿ. ನಾಯಕ್‌, ಸಹಕಾರ ಸಂಘಗಳ ಪ್ರಭಾರ ಉಪನಿಬಂಧಕಿ ಚಂದ್ರ ಪ್ರತಿಮಾ,
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಂಘದ ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಎಲ್‌. ಉಮಾನಾಥ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ರಾಮುಲು ನಾಯ್ಡು ಅವರನ್ನು ಸನ್ಮಾನಿಸಲಾಯಿತು. ಸೊಸೈಟಿಯ ಶತಾಮೃತ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿ.ಎಸ್‌. ರಾಜೇಶ್‌ ವಂದಿಸಿದರು. ಎನ್‌.ಆರ್‌. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!