ರಾಜ್ಯಕ್ಕೆ ಶುಭ ಸುದ್ದಿ, 8 ಮಂದಿ ಕೊರೋನಾ ಸೋಂಕಿತರು ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುವ ಮೂಲಕ ಆಂತಕ ಸೃಷ್ಟಿಯಾಗಿರುವಂತೆಯೇ ಕರ್ನಾಟಕದ ಪಾಲಿಗೆ ಕೊಂಚ ನಿರಾಳ ನೀಡುವ ಸುದ್ದಿಯೊಂದು ಬoದಿದೆ. ರಾಜ್ಯದಲ್ಲಿ ಕೋವಿಡ್ 19 ವೈರಸ್ ಗೆ ತುತ್ತಾಗಿದ್ದವರ  ಪೈಕಿ 8 ಸೋಂಕಿತರು ಇದೀಗ ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂದು ರಾಜ್ಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದು, 8 ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದರು.

ಕರ್ನಾಟಕದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದ್ದು, ಗರ್ಭಿಣಿ ಸೇರಿ 88 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ, ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 43 ಶಂಕಿತರು ಪತ್ತೆಯಾಗಿದ್ದು, 37,261 ಸೋಂಕಿತರ  ಕ್ವಾರಂಟೈನ್ ಪೂರ್ಣಗೊಂಡಿದೆ. ಇನ್ನು 25,382 ಮಂದಿ ಹೋಮ್ ಕ್ವಾರಂಟೇನ್‍ನಲ್ಲಿ ಇದ್ದು, ಇವರೆಲ್ಲರ ಕೈಗೆ ಸೀಲ್ ಹಾಕಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟೀವ್ ಕಂಡುಬಂದಿದೆ. ಬೆಂಗಳೂರಿನ ಇಬ್ಬರಿಗೆ, ಕಲಬುರಗಿ,  ಗೌರಿಬಿದನೂರು, ಭಟ್ಕಳದ ತಲಾ ಒಬ್ಬರಲ್ಲಿ ಇಂದು ಸೋಂಕು ಕಂಡುಬಂದಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಮರಳಿದ್ದರೆ, ಐವರು ಸೋಂಕಿತರಿಂದ ಸೋಂಕಿಗೆ ತುತ್ತಾಗಿದ್ದಾರೆ. ಒಬ್ಬರ ಟ್ರಾವೆಲ್ ಹಿಸ್ಟರಿ ತಿಳಿದುಬರಬೇಕಿದೆ. ನಂಜನಗೂಡು, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ  ಆತಂಕದ ವಾತಾವರಣ ನಿರ್ಮಾಣ ಆಗಿದೆ.

ಕರ್ನಾಟಕದಲ್ಲಿ ಒಟ್ಟು ಪತ್ತೆ ಮಾಡಲಾಗಿರುವ 101 ಪ್ರಕರಣಗಳಲ್ಲಿ 6 ಸೋಂಕಿತರು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕರ್ನಾಟಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈ ದಿನದವರೆಗೆ, 1,28,315 ಹೊರದೇಶದಿಂದ ಬಂದ ಪ್ರಯಾಣಿಕರನ್ನು  ತಪಾಸಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!