ಗೋಲಿಬಾರ್ ಸಮಗ್ರ ತನಿಖೆಗೆ ಆಗ್ರಹ: ಯು.ಆರ್.ಸಭಾಪತಿ
ಉಡುಪಿ ಡಿ.21 ಕೇಂದ್ರ ಸರ್ಕಾರ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರ ಸಾವಿಗೆ ಕಾರಣವಾದ ಘಟನೆಯನ್ನು ಮಾಜಿ ಶಾಸಕ ಯು.ಆರ್. ಸಭಾಪತಿ ಖಂಡಿಸಿದ್ದಾರೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಮತ್ತು ಅನಗತ್ಯವಾಗಿ ಗೋಲಿಬಾರ್ ನಡೆಸಿದ ಪೋಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸರ್ಕಾರ ಪ್ರಾಯೋಜಿತ ಗೋಲಿಬಾರ್ ಎಂದು ಆರೋಪಿಸಿರುವ ಸಭಾಪತಿ, ಇದಕ್ಕೆ ಪೂರಕವೆಂಬಂತೆ ಗೋಲಿಬಾರ್ ನಡೆಸಿರುವ ಪೋಲೀಸರು ಇಷ್ಟು ಗುಂಡು ಹಾರಿಸಿದರೂ ಒಬ್ಬನೂ ಸಾಯಲಿಲ್ಲ ಎಂಬ ಮಾತುಗಳು ದಾಖಲಾಗಿವೆ . ಹಾಗಾಗಿ ಕೊಲ್ಲಬೇಕೆಂಬ ಉದ್ದೇಶದಿಂದಲೇ ಗುಂಡು ಹಾರಿಸಲಾಗಿದೆ ಎಂದು ಅವರು ದೂರಿದ್ದಾರೆ.ಇಷ್ಟೇ ಅಲ್ಲದೇ ಆಸ್ಪತ್ರೆಯ ಒಳಗೇ ನುಗ್ಗಿ ಪೋಲೀಸರು ಗಾಯಾಳುಗಳಿಗೆ ಹಿಂಸೆ ನೀಡಲು ಮುಂದಾಗಿರುವುದು ಅತ್ಯಂತ ಅಮಾನವೀಯ ಎಂದು ಯು.ಆರ್.ಸಭಾಪತಿ, ಮೂರು ವರ್ಷದ ಹಿಂದೆ ಕೋಬ್ರಾ ಪೋಸ್ಟ್ ನಡೆಸಿದ ಸ್ಟಿಂಗ್ ಆಪ್ರೇಷನ್ ನಲ್ಲಿ ಮಂಗಳೂರಿನಲ್ಲಿ ಆರೆಸ್ಸೆಸ್ ಸಿದ್ದಾಂತ ಇರುವ ಪೋಲಿಸ್ ಸಿಬ್ಬಂದಿಗಳೇ ಇರುವಂತೆ ನೋಡಿಕೊಳ್ಳಲಾಗಿದೆ ಎಂಬ ಅಘಾತಕಾರಿ ವಿಚಾರವನ್ನು ಸ್ವತ: ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಗಣೇಶ್ ಕಾರ್ನಿಕ್ ಬಾಯಿಬಿಟ್ಟಿದ್ದ್ರರು. ಈಗ ನೋಡಿದರೆ, ಮಂಗಳೂರಿನ ಪೋಲೀಸರು ಆರೆಸ್ಸೆಸ್ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ ಎಂದಿದ್ದಾರೆ. ಮಂಗಳೂರು ಗೋಲೀಬಾರ್ ಘಟನೆ ಪರಿಶೀಲಿಸಲು ಬಂದ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಮಂಗಳೂರಿಗೆ ಬರದಂತೆ ತಡೆದಿರುವುದು ಯಡಿಯೂರಪ್ಪ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತದೆ ಎಂದು ಎಂದು ಸಭಾಪತಿ ಟೀಕಿಸಿದ್ದಾರೆ. ಗೋಲಿಬಾರ್ ನೆಡೆಸಿ ಇಬ್ಬರು ಅಮಾಯಕರ ಸಾವಿಗೆ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಮತ್ತು ಪೋಲಿಸ್ ಇಲಾಖೆಯೇ ನೇರ ಹೊಣೆ . ಈ ಬಗ್ಗೆ ಸಮಗ್ರ ತನಿಖೆ ನಡೆಯ ಬೇಕು .ಪೋಲೀಸರನ್ನು ಬಳಸಿ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿರುವ ಕ್ರಮವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಸಭಾಪತಿ ಆಗ್ರಹಿಸಿದ್ದಾರೆ. |