ಸದೃಢ ಸಮಾಜಕ್ಕೆ ಹೆಣ್ಣು ಮಕ್ಕಳು ಅಗತ್ಯ: ಜಿಲ್ಲಾಧಿಕಾರಿ
ಉಡುಪಿ : ಸದೃಢ ಸಮಾಜಕ್ಕೆ ಹೆಣ್ಣು ಮಕ್ಕಳ ಸಬಲೀಕರಣ ಅಗತ್ಯವಾಗಿದ್ದು, ಅವರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಶುಕ್ರವಾರ, ಮಕ್ಕಳ ಸಹಾಯವಾಣಿ 1098, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಿಟ್ಟೂರಿನ ಸ್ತ್ರೀ ಸೇವಾ ನಿಕೇತನದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡಿ, ಸಮಾಜದಲ್ಲಿ ಸಮಾನ ಸ್ಥಾನಮಾನ ಕೊಡಬೇಕೆನ್ನುವುದನ್ನು ನಾವು ಎಷ್ಟರ ಮಟ್ಟಿಗೆ ಪರಿಗಣಿಸುತ್ತೆವೆ ಎನ್ನುವುದನ್ನು ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ನಾವು ನೋಡಬಹುದು. ಹೆಣ್ಣು ಗಂಡೆಂಬ ತಾರತಮ್ಯ ಮಾಡದೇ ಪುರುಷನಂತೆಯೇ ಮಹಿಳೆಗೂ ಶಿಕ್ಷಣ ನೀಡಿ ಆಕೆಯನ್ನು
ಆರ್ಥಿಕವಾಗಿ ಸಬಲಳಾಗಿಸಬೇಕು. ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಠ ಪದ್ದತಿಯಿಂದಾಗಿ ಹೆಣ್ಣು ಮಕ್ಕಳು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸಿದ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಡಿಸಿ, ಅಗತ್ಯವಿರುವವರಿಗೆ ಸರಕಾರದ ಸವಲತ್ತುಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳಲು ಪ್ರತೀ ತಿಂಗಳು ಸಭೆ ನಡೆಸಿ ಬೇಕಾದ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ ಎಂದರು.
ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ 90 ಮಕ್ಕಳು ತೀವ್ರ ತೆರನಾದ ಅಪೌಷ್ಟಿಕತೆ ಮತ್ತು 2100 ಮಕ್ಕಳು ಸಾಧಾರಣ ರೂಪದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದರು.
ಉದ್ಯೋಗದ ಸ್ಥಳದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಪ್ರಮಾಣ ಕಡಿಮೆ ಇದ್ದು, ಈ ಪ್ರಮಾಣ ಶೇ. 50ಕ್ಕೆ ಏರಿದಾಗ ನಿಜವಾದ ಸಮಾನತೆ ಸಾಧಿಸಿದಂತಾಗುತ್ತದೆ. ಮಹಿಳೆ ಮತ್ತು ಮಕ್ಕಳಿಗೆ ಸಿಗುವ ಸೌಲಭ್ಯಗಳು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ವಿತರಣೆಯಾಗಬೇಕು, ಇದರಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ
ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಕೆಲಸವಾಗಬೇಕು. ಹಾಸ್ಟೆಲ್, ಶಾಲೆ, ಅಂಗನವಾಡಿಗಳ ಸುಧಾರಣೆ ಮೊದಲ ಆಧ್ಯತೆಯಾಗಿದ್ದು, ಇವುಗಳಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸಿದಾಗ ಸಮಾಜ ಸರಿಯಾಗುತ್ತದೆ
ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿ, ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾಗ ಸಮಾಜದಲ್ಲಿ ಸಮಾನತೆ ಏರ್ಪಡುತ್ತದೆ. ಹೆಣ್ಣು ಭ್ರೂಣ ಹತ್ಯೆ ಹೆಚ್ಚಾದಾಗ ಈ ಪ್ರಮಾಣದಲ್ಲಿ
ಏರು ಪೇರಾಗುತ್ತದೆ. ಅನಾದಿ ಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಬಂದಿದೆ. ಅದೇ ವೇಳೆ ಸಮಾಜಕ್ಕೆ ಮಾದರಿಯಾಗಿ ಬದುಕಿದಂತಹ ಹೆಣ್ಣು ಮಕ್ಕಳ ನಿದರ್ಶನವೂ ನಮ್ಮ ಮುಂದಿದೆ. ಹೆಣ್ಣು ಮಕ್ಕಳನ್ನು, ವಯಸ್ಸಾದ ತಾಯಿಯನ್ನು ತ್ಯಾಜ್ಯದಂತೆ ಹೊರಗೆಸೆಯುವ ಘಟನೆಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ, ಬಾಲ್ಯ ವಿವಾಹ, ಕೌಟುಂಬಿಕ ಹಿಂಸೆ, ಲೈಂಗಿಕ ಶೋಷಣೆ ಮುಂತಾದ ಅನಿಷ್ಟಗಳು ಒಂದೆಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಹೆಣ್ಣು ಮಕ್ಕಳು ಬಾಹ್ಯಾಕಾಶದಲ್ಲೂ ತಮ್ಮ ಸಾಮಥ್ರ್ಯವನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಶಕ್ತಿ,
ಇದರಿಂದ ಆರ್ಥಿಕ ಸಬಲತೆಯನ್ನು ಪಡೆದು ಜೀವನದಲ್ಲಿ ಮಹತ್ತರವಾದ ಸಾಧನೆಯನ್ನು ಸಾಧಿಸುವ ಗುರಿ ಪ್ರತಿಯೊಬ್ಬರಿಗೂ ಇರಬೇಕು. ಎಲ್ಲಾ ಸಂಸ್ಥೆಗಳ ಸಹಯೋಗದಿಂದ ಹೆಣ್ಣು ಭ್ರೂಣ ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒತ್ತು ನೀಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕು
ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬಾಲ ಮಂದಿರದ ಮಕ್ಕಳಿಗೆ ಉಡುಗೊರೆಯನ್ನು ವಿತರಿಸಲಾಯಿತು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ. ಫುಟಾರ್ಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್, ಮಾಹೆಯ ವಿದ್ಯಾರ್ಥಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ, ಮಕ್ಕಳ ಸಹಾಯ ವಾಣಿ ನಿರ್ದೇಶಕ ರಾಮ ಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಜನಾರ್ದನ ಭಟ್ ಸ್ವಾಗತಿಸಿದರು, ತ್ರಿವೇಣಿ ನಿರೂಪಿಸಿದರು. ಕಸ್ತೂರಿ ವಂದಿಸಿದರು.