ಜಿಡಿಪಿ ಮತ್ತೆ ಕುಸಿತ!. 6ವರ್ಷಗಳಲ್ಲೇ ಕ್ಷೀಣ!
ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಶೇ.5 ರಿಂದ ಶೇ.4.5ಕ್ಕೆ ಕುಸಿದಿದೆ.
ನ.29 ರಂದು ಬಿಡುಗಡೆಯಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ ಕಂಡಿದೆ. 2012-13 ನೇ ಸಾಲಿನ ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.4.3 ರಷ್ಟಕ್ಕೆ ಕುಸಿದಿತ್ತು. ಈ ಬಳಿಕ ಇದೇ ಮೊದಲ ಬಾರಿಗೆ 4.5 ಕ್ಕೆ ಕುಸಿದಿದೆ.
2018-19 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7 ರಷ್ಟಿತ್ತು. ಕಳೆದ ವರ್ಷ ಆರು ತಿಂಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ.7.5 ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ ಈ ಬಾರಿ ಆರು ತಿಂಗಳ ಅವಧಿಯಲ್ಲಿ ಶೇ.4.8 ರಷ್ಟೇ ಬೆಳವಣಿಗೆ ಸಾಧ್ಯವಾಗಿದೆ.
2019-20 ರ ಅವಧಿಯ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್ ಬಿಐ ಶೇ.6.9 ರಿಂದ ಶೇ.6.1 ಕ್ಕೆ ಇಳಿಸಿತ್ತು. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ.6 ರಷ್ಟಿತ್ತು. ಇದೂ ಸಹ ಅಲ್ಲಿನ ಆರ್ಥಿಕತೆಗೆ ಸಂಬಂಧಿಸಿದಂತೆ 27 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯದ್ದಾಗಿತ್ತು.