ಸ್ವಚ್ಛ ಭಾರತದ ಕನಸಿಗೆ ವಿರುದ್ಧ: ಉಡುಪಿಯ ರಸ್ತೆಗಳಲ್ಲಿ ಮೆರೆಯುತ್ತಿರುವ ಕಸದ ರಾಶಿ

 ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸಿಗೆ ಉಡುಪಿ ನಗರದ ಜನತೆ ಮಾತ್ರ ತದ್ವಿರುದ್ಧವಾಗಿದ್ದರಾ? ಎಂಬ ಸಂಶಯ ಉಡುಪಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿದೆ. ಹೌದು ಸ್ವಚ್ಛ ಭಾರತ್‌ಗೆ ಅವಮಾನ ಎಂಬಂತೆ ನಿಟ್ಟರೂ ಬಳಿ ಕಸದ ರಾಶಿ ಎಸೆದಿರುವುದು ನೋಡಿದರೆ ತಿಳಿಯುತ್ತದೆ.

ರಾಷ್ಟ್ರೀಯ ಹೆದ್ದಾರಿಯಾಗಿ ದೇವಳದ ನಗರಕ್ಕೆ ಇನ್ನೇನು ಕಾಲಿಡಬೇಕು ಎನ್ನುವವರಿಗೆ ಈ ಕಸದ ರಾಶಿ ಸ್ವಾಗತಿಸುವ ರೀತಿ ಇದು.

 ಈಗಾಗಲೇ ಸ್ವಚ್ಛ ನಗರಸಭೆ ಎಂಬ ಹೆಗ್ಗಳಿಕೆ ಉಡುಪಿ ನಗರಸಭೆಗಿದೆ ಮಾತ್ರವಲ್ಲದೆ ಮಲವನ್ನು ತಲೆಮೇಲೆ ಹೊರುವ ಪದ್ಧತಿಯನ್ನು ಮೊದಲು ನಿಲ್ಲಿಸಿದ ಕೀರ್ತಿ, ಆರೋಗ್ಯ ಶಿಕ್ಷಣ, ಮೂಲಸೌಕರ್ಯಗಳ ಸೌಲಭ್ಯಗಳನ್ನು ಜನತೆಗೆ ಮುಟ್ಟಿಸುವಲ್ಲಿ ಹಾಗೂ ಇದರ ಸದುಪಯೋಗ ಪಡಿಸುವಲ್ಲಿ ಉಡುಪಿ ನಗರಸಭೆ ಮುಂಚೂಣಿಯಲ್ಲಿದೆ. ಆದರೆ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಕನಸನ್ನು ಮಾತ್ರ ಇಲ್ಲಿನ ಜನತೆ ಅಣಕಿಸುವಂತಿದೆ.

 ನಿಟ್ಟರೂ, ಶಾರದ ಹೊಟೇಲ್ ಬಳಿಯ ಸೇತುವೆಯ ಎರಡು ಬದಿಗಳಲ್ಲಿ ತ್ಯಾಜ್ಯವನ್ನು ಎಸೆದು ನಗರದ ಸ್ವಚ್ಛತೆ ಹಾಳುಗೆಡುವಂತಾಗಿದೆ.ಕೆಲವೊಂದು ವಿಕೃತ ಮನಸ್ಸಿನ ಜನರು ಈ ರೀತಿ  ತಮ್ಮ ಕಾರು, ದ್ವಿಚಕ್ರ ವಾಹನದಲ್ಲಿ  ಹೋಗುವಾಗ ಉಡುಪಿ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ ಕಸದ ರಾಶಿಯನ್ನು ಎಸೆದು ಹೋಗುತ್ತಿದ್ದಾರೆ. ಇನ್ನೊಂದೆಡೆ ನಗರಸಭೆಯಿಂದ ಸಮರ್ಪಕ ರೀತಿಯಲ್ಲಿ ಕಸವನ್ನು ಸಂಗ್ರಹಿಸುವುದಿಲ್ಲ ಎಂಬ  ಆರೋಪವು ಕೇಳಿಬರುತ್ತಿದೆ.

ಈಗಾಗಲೆ ನಿಟ್ಟೂರು ಕೊಡಂಕೂರು ಭಾಗದಲ್ಲಿ ಪ್ರತಿ ವರ್ಷ ಮಳೆಗಾಲ ಬಂತೆಂದರೆ ಈ ಭಾಗದಲ್ಲಿ ಮಲೇರಿಯಾ, ಡೆಂಗ್ಯೂ ಕಾಯಿಲೆಗಳು ಹರಡುವುದು ಸರ್ವೆಸಾಮಾನ್ಯ ಇದಕ್ಕೆಲ್ಲ ಮೂಲ ಕಾರಣ ಇಲ್ಲಿರುವ ತ್ಯಾಜ್ಯವೇ ಎಂದು ಜನರು ದೂರುತ್ತಿದ್ದಾರೆ.

 ರಾಷ್ಟ್ರೀಯ ಹೆದ್ದಾರಿ ಅಂಬಾಗಿಲು ದಾಟಿದಾಗ ಪುತ್ತೂರು ,ನಿಟ್ಟೂರು ,ಕರಾವಳಿ ಬೈಪಾಸ್  ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳ ರಾಶಿ ರಾಶಿ ಎಸೆದು ಹೋಗುತ್ತಾರೆ. ಕೆಲವೊಂದು ಅಂಗಡಿ ಮಾಲೀಕರು  ಉಪಯೋಗಿಸಿದ ಸಿಯಾಳ  ಇಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಲ್ಲಿ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಮೂಲ ಕಾರಣವಾಗಿದೆ ಎಂದು ಸ್ಥಳೀಯ ರಿಕ್ಷಾ ಚಾಲಕ ಸುಜಯ ಪೂಜಾರಿ ಹೇಳುತ್ತಾರೆ.

ಈಗಾಗಲೇ ಈ ಭಾಗದಲ್ಲಿ ನಗರದ ಕೊಳಚೆ  ನೀರು ಶುದ್ಧೀಕರಣ ಘಟಕವಿದ್ದು ಇದರ ವಿಪರೀತ ವಾಸನೆಯಿಂದ ಇದ್ದ ಮನೆಯನ್ನು ಮಾರಾಟ ಮಾಡಲಾಗದೇ ಬೇರೆ ಕಡೆ ಹೋಗಿ ನೆಲೆ ನಿಲ್ಲಲು ಆಗದ ಪರಿಸ್ಥಿತಿ ಉಂಟಾಗಿದೆಂದು ಸ್ಥಳೀಯರಾದ ರಾಮಣ್ಣ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

ಇನ್ನಾದರೂ ನಗರಸಭೆ ಎಚ್ಚೆತ್ತು ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು, ಸ್ವಚ್ವಸುಂದರ ಉಡುಪಿಗೆ ಸ್ವಾಗತ ಕೋರುವ ನಾಮಫಲಕ ಅಳವಡಿಸಬೇಕೆಂಬುದು ಉಡುಪಿ ಟೈಮ್ಸ್ ಬಳಗದ ಆಶಯ.

Leave a Reply

Your email address will not be published. Required fields are marked *

error: Content is protected !!