ಗಂಗಾ ಕಲ್ಯಾಣ ಯೋಜನೆ: ಮಾರ್ಗಸೂಚಿ ಬದಲಿಸಲು ದಿನಕರ ಬಾಬು
ಉಡುಪಿ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಒಂದು ಎಕರೆ ಜಾಗ ಇರಬೇಕು ಎಂದು ಮಾರ್ಗಸೂಚಿ ಇದ್ದು, ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಒಂದು ಎಕರೆಗೆ ಬದಲಾಗಿ ಅರ್ಧ ಎಕರೆಗೆ ಮಿತಿಗೊಳಿಸಬೇಕು ಹಾಗೂ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಅಗತ್ಯ ಕ್ರಮವಹಿಸಬೇಕು ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮನವಿ ಸಲ್ಲಿಸಿದ್ದಾರೆ.
ಅವರು ಗುರುವಾರ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರೊಂದಿಗೆ, ರಾಜ್ಯದ ಪರಿಶಿಷ್ಟ ಜಾತಿಯ ಸಚಿವರು, ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳೊಂದಿಗೆ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಮನವಿ ಮಾಡಿದರು. ಸಭೆಯಲ್ಲಿ ರಾಷ್ಟ್ರೀಯ ಆಯೋಗದ ಸದಸ್ಯರು, ಶಾಸಕರು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ವಿವಿಧ ಜಿಲ್ಲಾ ಪಂಚಾಯತ್‍ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.