21 ದೇಶಗಳ ನೋಟಿನ ಗಣೇಶನ ನೋಡಲು ಮುಗಿಬಿದ್ದ ಜನತೆ
ಉಡುಪಿ:ಗಣೇಶ ಹಬ್ಬಕ್ಕೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಕಲಾವಿದರ ಕೈ ಚಳಕದಿಂದ ವೈಶಿಷ್ಟತೆ ಗಣಪತಿ ರೂಪುಗೊಂಡಿವೆ. ಸಾಯಿರಾಧಾ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ೨೧ ದೇಶಗಳ ಕೃತಕ ನೋಟ್ ಬಳಸಿ ಮಣಿಪಾಲ್ ಸ್ಯಾಂಡ್ ಹಾರ್ಟ್ ಕಲಾವಿದರರ ಕೈ ಚಳಕದಲ್ಲಿ ಮೂಡಿಬಂದಿರುವ ವಿಶ್ವಧನಾಪ ಗಣೇಶ ನೋಡುಗರ ಜನಾಕರ್ಷಣೆಯ ಕೇಂದ್ರವಾಗಿದೆ.
ಗಣೇಶ ಚತುರ್ಥಿ ಅಂಗವಾಗಿ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೇಬೆಟ್ಟು ಕೃತಕ ನೋಟುಗಳನ್ನು ಬಳಸಿ ೧೨ ಅಡಿ ಎತ್ತರದ ಗಣೇಶನ ಕಲಾಕೃತಿ ರಚಿಸಿದ್ದರು. ಈ ಕಲಾಕೃತಿ ಮುಂದೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.
ವಿಎಸ್‌ಟಿ ರಸ್ತೆಯಲ್ಲಿರುವ ಸಾಯಿರಾಧಾ ಟಿವಿಎಸ್ ಶೋರೂಂನಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಈ ಕಲಾಕೃತಿಯನ್ನು ಸಾಯಿರಾಧಾ ಸಮೂಹ ಸಂಸ್ಥೆಯ ಎಂ.ಡಿ. ಮನೋಹರ್ ಎಸ್. ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ನೋಟ್‌ನ ಕಲಾಕೃತಿಯನ್ನು ರಚಿಸಿದ್ದು, ಸೆ. 9 ರ ವರೆಗೆ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಚತುರ್ಥಿ ಪ್ರತಿಯೊಬ್ಬರಿಗೂ ಒಳಿತು ಮಾಡಲಿ ಎಂದು ಶುಭ ಹಾರೈಸಿದರು.
ಮಣಿಪಾಲ ಸ್ಯಾಂಡ್ ಹಾರ್ಟ್‌ನ ಕಲಾವಿದ ಶ್ರೀನಾಥ್ ಮಣಿಪಾಲ ಮಾತನಾಡಿ, 21 ದೇಶಗಳ ಪೈಕಿ ನಮ್ಮ ದೇಶದ ಹಳೆಯ ಹಾಗೂ ಚಾಲ್ತಿಯಲ್ಲಿರುವ ನೋಟ್‌ಗಳನ್ನೇ ಜಾಸ್ತಿ ಬಳಸಿಕೊಂಡಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ತಾನ್, ಬುತಾನ್, ಬಹ್ರೈನ್, ಯುಎಇ, ಅಮೇರಿಕಾ, ಇಸ್ರೇಲ್ ಸಹಿತ ಇತರೆ ದೇಶಗಳ ಕೃತಕ ನೋಟ್‌ಗಳನ್ನು ಕಲಾತ್ಮಕವಾಗಿ ಪೋಣಿಸಲಾಗಿದೆ ಎಂದರು.
ಈ ಸಂದರ್ಭ ಸಾಯಿರಾಧಾ ಸಂಸ್ಥೆಯ ಸಿದ್ಧಾರ್ಥ್ ಎಂ. ಶೆಟ್ಟಿ, ನಗರಸಭೆ ಸದಸ್ಯರಾದ ಟಿ.ಜಿ. ಹೆಗ್ಡೆ, ಮಾನಸ ಪೈ, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಜನತಾ ಪಬ್ಲಿಸಿಟಿಯ ಮಾಲೀಕ ಹರ್ಷರಾಜ್ ಶೆಟ್ಟಿ, ಟಿವಿಎಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ವೃಜನಾಥ್ ಆಚಾರ್ಯ, ಎಚ್‌ಆರ್ ದಿವಾಕರ್ ರಾವ್ ಉಪಸ್ಥಿತರಿದ್ದರು.
ಸಂಸ್ಥೆಯ ಡಿವಿಜನಲ್ ಮ್ಯಾನೇಜರ್ ಪ್ರಕಾಶ್ ತಂತ್ರಿ ಕಾರ್‍ಯಕ್ರಮ ನಿರೂಪಿಸಿದರು.
ಈ ಮೊದಲು ಕಲಾವಿದರು ಪೆಪರ್‌ಕಪ್, ಹ್ಯಾಂಡ್‌ಮೆಡ್ ಪೇಪರ್, ಗುಡಿಕೈಗಾರಿಕೆಯ ವಸ್ತುಗಳು, ಬಿಸ್ಕೇಟ್ ಗಣೇಶ, ದಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿಗಳನ್ನು ರಚಿಸಿದ್ದರು.