ಫಾ.ಮಹೇಶ್ ಆತ್ಮಹತ್ಯೆ: ಸುಳ್ಳು ಸುದ್ಧಿಗಳು ಧರ್ಮಪ್ರಾಂತದ ವರ್ಚಸ್ಸಿಗೆ ಹಾನಿ
ಉಡುಪಿ: ಉಡುಪಿ ಧರ್ಮಪ್ರಾಂತದ ಆಡಳಿತಕ್ಕೆ ಒಳಪಟ್ಟ ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಫಾದರ್ ಮಹೇಶ್ ಡಿಸೋಜಾರವರು 11.10.2019 ರಂದು ರಾತ್ರಿ ತಮ್ಮ ಕಛೇರಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆ ಪ್ರಕರಣವನ್ನು ಪೊಲೀಸರು ಅಸ್ವಾಭಾವಿಕ ಮರಣವೆಂದು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಇದೀಗ ಸುದೀರ್ಘ ತನಿಖೆಯ ನಂತರ ತನಿಖಾಧಿಕಾರಿಗಳು ಪ್ರಕರಣದ ಅಂತಿಮ ವರದಿಯನ್ನು ಕುಂದಾಪುರದಲ್ಲಿರುವ ಉಪ ವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿ ಇದು ‘ಆತ್ಮಹತ್ಯೆ’ ಪ್ರಕರಣ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಉಡುಪಿ ಧರ್ಮಪ್ರಾಂತ್ಯ ಪ್ರಕರಣದ ತನಿಖಾಧಿಕಾರಿಗಳಾದ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ವರು ಈ ಸಂಬಂಧಿತ ನಡೆಸಿದ ಸುದೀರ್ಘ ತನಿಖೆಯಲ್ಲಿ 95 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಅವುಗಳ ಆಧಾರದ ಮೇಲೆ ಸಾವಿನ ನಿಖರ ಕಾರಣವನ್ನು ನಿರ್ಧರಿಸಿದ್ದಾರೆ. ಶಾಲೆಯ ಸಾಲದ ಹೊರೆ, ಶಾಲಾ ಬಸ್ಸುಗಳ ಸಾಲದ ಹೊರೆ, ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಮಂಡಳೀಯ ಕಾರ್ಯದರ್ಶಿ ಫಾದರ್ ವಿನ್ಸೆಂಟ್ ರೊಬರ್ಟ್ ಕ್ರಾಸ್ತಾ, ಶಿರ್ವ ಚರ್ಚಿನ ಹಿರಿಯ ಧರ್ಮಗುರು ಫಾದರ್ ಡೆನಿಸ್ ಡೆಸಾ, ಸಹಾಯಕ ಗುರು ಫಾದರ್ ಆಶ್ವಿನ್ ಆರಾನ್ಹಾ ಹಾಗೂ ಉಡುಪಿ ಧರ್ಮಪ್ರಾಂತದ ಬಿಷಪ್ರವರು ಹಾಗು ಶ್ರೀ ಆಲ್ವಿನ್ ಡೊಮಿನಿಕ್ ದಾಂತಿಯವರು ಫಾದರ್ ಮಹೇಶ್ ಡಿಸೋಜರವರ ಸಾವಿಗೆ ಕಾರಣರಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ, ಫಾದರ್ ಮಹೇಶ್ ಡಿ’ಸೋಜ ಹಾಗೂ ಶಿರ್ವ ಚರ್ಚಿನ ಹಿರಿಯ ಧರ್ಮಗುರುಗಳ ಮಧ್ಯೆ ಮನಸ್ತಾಪವಿತ್ತು ಮತ್ತು ಫಾದರ್ ಮಹೇಶ್ ಡಿ’ಸೋಜರವರ ವರ್ಗಾವಣೆಯ ವಿಷಯದಲ್ಲಿ ಚಾಲ್ತಿಯಲ್ಲಿರುವ ಯಾವುದೇ ಊಹಾಪೋಹಗಳು ಆಧಾರರಹಿತ ಎಂದು ವರದಿಯಲ್ಲಿ ಹೇಳಲಾಗಿದೆ
ಫಾದರ್ ಮಹೇಶ್ ಡಿ’ಸೋಜರವರ ಆತ್ಮಹತ್ಯೆಗೆ ವ್ಯಕ್ತಿಯೊಬ್ಬರು ನೀಡಿದ ಅಪರಾಧಿಕ ದುಷ್ಪ್ರೇರಣೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫಾದರ್ ಮಹೇಶ್ ಡಿ’ಸೋಜ ಹಾಗೂ ಆ ವ್ಯಕ್ತಿಯ ಪತ್ನಿ ಮೊಬೈಲ್ ಸಂಪರ್ಕದಲ್ಲಿದ್ದು ಫೋನ್ ಕರೆಗಳನ್ನು ಮಾಡುತ್ತಿದ್ದು, ಚ್ಯಾಟಿಂಗ್ ನಡೆಸುತ್ತಿದ್ದು, ಇದನ್ನು ಆಕ್ಷೇಪಿಸಿ ಹಲವು ಬಾರಿ ಆ ವ್ಯಕ್ತಿಯು ಫಾದರ್ ಮಹೇಶ್ ಡಿ’ಸೋಜರವರಿಗೆ ಎಚ್ಚರಿಕೆಯನ್ನು ನೀಡಿದ್ದರು. ಆದಾಗ್ಯೂ, 11.10.2019 ರಂದು ರಾತ್ರಿ ತನ್ನ ಹೆಂಡತಿ ಹಾಗೂ ಫಾದರ್ ಮಹೇಶ್ ಡಿ’ಸೋಜರವರು ಚ್ಯಾಟಿಂಗ್ ನಡೆಸಿದ್ದನ್ನು ನೋಡಿ ಆಕ್ರೋಶಗೊಂಡ ಆ ವ್ಯಕ್ತಿ ಮೊಬೈಲ್ನಲ್ಲಿ ಫಾದರ್ ಮಹೇಶ್ ಡಿ’ಸೋಜರವರನ್ನು ಅವಾಚ್ಯವಾಗಿ ಬೈದಿದ್ದಲ್ಲದೆ, ಅವರ ತಾಯಿಗೆ ಅವಮಾನಕರವಾಗಿ ಬೈದು, ಹಿರಿಯ ಗುರುಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡುವ ಗಂಭೀರ ಬೆದರಿಕೆಯನ್ನು ಒಡ್ಡಿದರು. ಫಾದರ್ ಮಹೇಶ್ ಡಿ’ಸೋಜರವರಿಗೆ, `ಕುತ್ತಿಗೆಗೆ ಹಗ್ಗ ತೆಗೆದುಕೊಳ್ಳಬೇಕು ಇಲ್ಲವಾದರೆ ಅರ್ಧ ಗಂಟೆಯಲ್ಲಿ ನಿನ್ನ ಮರ್ಯಾದೆ ತೆಗೆಯುತ್ತೇನೆ’ ಎನ್ನುವುದರ ಮುಖಾಂತರ ಅಪರಾಧಿಕ ದುಷ್ಪ್ರೇರಣೆಯನ್ನು ನೀಡಿರುತ್ತಾರೆ. ಇದರಿಂದ ಫಾದರ್ ಮಹೇಶ್ ಡಿ’ಸೋಜರವರು ತತ್ಕ್ಷಣದ ದಿಗ್ಬ್ರಮೆಗೆ ಒಳಗಾಗಿ ದಿಕ್ಕು ತೋಚದಂತವರಾಗಿ ಮಾನ, ಮರ್ಯಾದೆ, ಪ್ರತಿಷ್ಠೆಗೆ ಹೆದರಿ ಮತ್ತು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬೇರೆ ದಾರಿ ಕಂಡುಕೊಳ್ಳಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖಾ ವರದಿಯು ತಿಳಿಸುತ್ತದೆ.
ಸಾವಿನ ಸಂದರ್ಭದಲ್ಲಿ ಫಾದರ್ ಮಹೇಶ್ ಡಿ’ಸೋಜರವರಿಂದ ಯಾವುದೇ ಪ್ರತಿರೋಧ ವ್ಯಕ್ತಪಡಿಸಿದ ಲಕ್ಷಣಗಳಿಲ್ಲ ಹಾಗೂ ನೇಣು ಬಿಗಿದುಕೊಂಡ ಸ್ಥಳದಲ್ಲಿ ಯಾವುದೇ ವಸ್ತುಗಳು ಚೆಲ್ಲಾಪಿಲ್ಲಿಯಾಗಿರಲಿಲ್ಲ. ಅಂತೆಯೇ ಯಾವುದೇ ವಿಷ ಪದಾರ್ಥ ಸೇವನೆಯಾದ ಲಕ್ಷಣಗಳು ಕಂಡುಬಂದಿಲ್ಲ ಎಂದು ತನಿಖಾ ವರದಿಯು ತಜ್ಞರ ಫೋರೆನ್ಸಿಕ್ ವರದಿಯನ್ನು ಉಲ್ಲೇಖಿಸಿ ಸ್ಪಷ್ಟಪಡಿಸುತ್ತದೆ. ಹೀಗಾಗಿ ಸಾವಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಯ ಹೊರತು ಬೇರೆ ಯಾವ ಕಾರಣಗಳನ್ನೂ ತನಿಖಾಧಿಕಾರಿಗಳು ತಳ್ಳಿ ಹಾಕಿದ್ದಾರೆ. ಫಾದರ್ ಮಹೇಶ್ ಡಿ’ಸೋಜರವರು ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬುದನ್ನು ತನಿಖೆಯಲ್ಲಿ ಬಿಚ್ಚಿಟ್ಟಿದ್ದಾರೆ.
ಪೊಲೀಸ್ ಇಲಾಖೆಯು ನಡೆಸಿದ ಈ ಸುದೀರ್ಘ ತನಿಖೆಯು ವಸ್ತುನಿಷ್ಠವಾಗಿದ್ದು, ನಿಷ್ಪಕ್ಷಪಾತವೂ ಆಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ಸಾಮಾಜಿಕ ಮಾಧ್ಯಮಗಳು ಹಾಗೂ ಇತರ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ಧಿಗಳು ಹಾಗೂ ಊಹಾಪೋಹಗಳಿಂದ ಉಡುಪಿ ಧರ್ಮಪ್ರಾಂತದ ಬಿಷಪ್, ಧರ್ಮಗುರುಗಳು, ಭಕ್ತಾದಿಗಳು ಹಾಗೂ ಧರ್ಮಪ್ರಾಂತದ ವರ್ಚಸ್ಸಿಗೆ ಅತೀವ ಹಾನಿಯಾಗಿದ್ದು, ತನಿಖೆಯ ಈ ಅಂತಿಮ ವರದಿಯು ಇವುಗಳಿಗೆ ತೆರೆ ಎಳೆಯುವುದೆಂದು ಬಯಸುತ್ತೇವೆ ಎಂದು ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.
Enquiry by the Police department apart, I wish clarification is given by the concerned, as to how the hand and some other parts were found to be bruised and how the knot was Not around the neck…..