ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ: ಡೇವಿಡ್ ಡಿಸೋಜ ಜಾಮೀನು ಅರ್ಜಿ ತಿರಸ್ಕ್ರತ
ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಆರೋಪಿ ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ (49) ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯ ಇಂದು ತಿರಸ್ಕರಿಸಿ ಆದೇಶ ನೀಡಿದೆ.
ಆರೋಪಿ ಪರ ವಕೀಲರು ಡೇವಿಡ್ ಡಿಸೋಜಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪ ಸಲ್ಲಿಸಿದ್ದರು. ಈ ಸಂಬಂಧ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿ, ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದರು.
2019ರ ಅ.11ರಂದು ರಾತ್ರಿ ಆರೋಪಿಯ ಪತ್ನಿ ಪ್ರಿಯಾ ಡಿಸೋಜರಿಗೆ ಫಾ.ಮಹೇಶ್ ಡಿಸೋಜ ಮೊಬೈಲ್ನಲ್ಲಿ ಮೆಸೇಜ್ ಮಾಡಿರುವುದನ್ನು ಆಕ್ಷೇಪಿಸಿ, ಆರೋಪಿ ಮೊಬೈಲ್ ಮೂಲಕ ಫಾದರ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪರಣೆ ನೀಡಿದ್ದು, ನಂತರ ಪತ್ನಿ ಮೊಬೈಲ್ ನಲ್ಲಿದ್ದ ಸಂದೇಶಗಳನ್ನು ಅಳಿಸಿ ಹಾಕಿ ಸಾಕ್ಷ್ಯ ನಾಶಮಾಡಿದ ಆರೋಪದಲ್ಲಿ ಡೇವಿಡ್ ಡಿಸೋಜ ಬಂಧಿಸಲಾಗಿದೆ.