ನಂಜನಗೂಡಿನಲ್ಲಿ ಮತ್ತೆ ನಾಲ್ವು ಹೊಸ ಪ್ರಕರಣ , ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆ
ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಮವಾರ ನಂಜನಗೂಡಿನಲ್ಲಿ ನಾಲ್ಕು ಮತ್ತು ತುಮಕೂರಿನಲ್ಲಿ ಒಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.
ಇಂದು ನಂಜನಗೂಡಿನಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ನಾಲ್ಕು ಜುಬಿಲೆಂಟ್ ಕಾರ್ಖಾನೆಯ ಕಾರ್ಮಿಕನೊಂದಿಗೆ ನೇರ ನಂಟು ಹೊಂದಿವೆ. ಇದರೊಂದಿಗೆ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 4 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ.
ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳಿಗೆ, ದಿನಸಿ ಪದಾರ್ಥ ತರೋ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ರದ್ದು ಮಾಡಲಾಗಿದೆ. ನಂಜನಗೂಡು ಪಟ್ಟಣದಿಂದ ಯಾರು ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂಧಿ ಹಾಕಿದ್ದು, ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ.
ಮೈಸೂರಿನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಬ್ಬರು ವಿದೇಶದಿಂದ ಬಂದವರು ಹಾಗೂ ಉಳಿದ 10 ಮಂದಿ ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಸೋಂಕು ತಗುಲಿದೆ. ಇದು ನೋವಿನ ಸಂಗತಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಹೇಳಿದ್ದಾರೆ.
12 ಕೊರೋನಾ ಸೋಂಕಿತರ ಪೈಕಿ 6 ಮಂದಿ ಕೋವಿಡ್-19ಗಾಗಿ ಪ್ರತ್ಯೇಕವಾಗಿ ಮಾಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರು ಕೂಡ ಇಂದು ಕೋವಿಡ್-19ಗಾಗಿ ಇರುವ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆ ಎಂದು ಸಚಿವರು ತಿಳಿಸಿದರು