ಬಜರಂಗದಳದ ಮಾಜಿ ಸಂಚಾಲಕ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನ
ಬೆಂಗಳೂರು: ಬಜರಂಗದಳದ ಮಾಜಿ ಸಂಚಾಲಕ ಹಾಗೂ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್(47) ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಹೇಂದ್ರ ಕುಮಾರ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಬಜರಂಗದಳದ ಕರ್ನಾಟಕ ರಾಜ್ಯ ಸಂಚಾಲಕರಾಗಿದ್ದ ಅವರು ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿದ್ದರು. ಆದರೆ ಕೆಲ ಸಮಯದ ಬಳಿಕ ಸಂಘಟನೆಯಿಂದ ಹೊರ ಬಂದಿದ್ದ ಮಹೇಂದ್ರ ಕುಮಾರ್ ಬಜರಂಗ ದಳವನ್ನು ಕಟುವಾಗಿ ಟೀಕಿಸಿದ್ದರು. ಇಷ್ಟೇ ಅಲ್ಲದೇ, ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಯನ್ನೂ ಕಟುವಾಗಿ ವಿರೋಧಿಸಿದ್ದರು.
ಸಾಮಾಜಿಕ, ಜಾಗೃತಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತಿದ್ದ ಮಹೇಂದ್ರ ಕುಮಾರ್, ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಕಾಯ್ದೆ ವಿರುದ್ಧವೂ ಹಲವಾರು ಪ್ರತಿಭಟನೆಗಳಲ್ಲಿ ಭಾವವಹಿಸಿ,ಮಾತನಾಡಿದ್ದರು. ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕವೂ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನರಿಗೆ ಹತ್ತಿರವಾಗಿದ್ದರು.