ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಲು ಒತ್ತಾಯ
ಉಡುಪಿ: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಸರ್ಕಾರ ಮೀಸಲಿಟ್ಟಿರುವ ಹಣವನ್ನು ಸಮಾಜದ ಉದ್ಧಾರಕ್ಕೆ ವ್ಯಯಿಸಲು ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೫ ವರ್ಷಗಳಲ್ಲಿ ದಲಿತರ ಉದ್ಧಾರಕ್ಕೆ ೧.೪೨ ಲಕ್ಷ ಕೋಟಿ ಹಣ ಮೀಸಲಿಡಲಾಗಿದೆ. ಆದರೆ, ಮೀಸಲಿಟ್ಟ ಅನುದಾನ ಮೂಲ ಉದ್ದೇಶಕ್ಕೆ ವ್ಯಯವಾಗದೆ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಒಂದೂವರೆ ವರ್ಷದಿಂದ ಅಧ್ಯಕ್ಷರ ನೇಮಕ ಆಗಿಲ್ಲ. ಆದಾಯ ಇರುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಲು ತೋರುವ ಉತ್ಸುಕತೆಯನ್ನು ಇಲ್ಲಿ ತೋರುತ್ತಿಲ್ಲ. ಆಯೋಗಕ್ಕೆ ಕಾನೂನು ಜ್ಞಾನ ಇರುವ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್.ಸಿ, ಎಸ್.ಟಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ಬಯಸಿ ಅರ್ಜಿ ಹಾಕಿದವರಿಗೆಲ್ಲ ವಸತಿ ವ್ಯವಸ್ಥೆ ನೀಡಬೇಕು. ದಲಿತರಿಗಾಗಿ ಕೇಂದ್ರ ಸರ್ಕಾರ ವಿಶೇಷ ಘಟಕ ಯೋಜನೆಯನ್ನು ಜಾರಿಗೊಳಿಸಿ ಅನುದಾನ ಮೀಸಲಿಡಬೇಕು. ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲ ಸೌಲಭ್ಯ, ಪ್ರಾತಿನಿಧ್ಯ ನೀಡಬೇಕು ಎಂದು ಶಂಕರ್ ಒತ್ತಾಯಿಸಿದರು.
ದಲಿತರ ರಕ್ಷಣೆಗಿರುವ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕಾಯ್ದೆಯಡಿ ದಾಖಲಾದ ಶೇ ೩ರಷ್ಟು ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್ ಹಾಕಲಾಗಿದೆ. ಶೇ ೯೭ರಷ್ಟು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಬಿ ರಿಪೋರ್ಟ್ ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಬಲಗೊಳಿಸಬೇಕು. ಸಾಕ್ಷಿದಾರರಿಗೆ ಸೂಕ್ತ ಭದ್ರತೆ ನೀಡಬೇಕು. ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ್, ಸುಂದರ್ ಗುಜ್ಜರಬೆಟ್ಟು, ಲೋಕೇಶ್ ಪಡುಬಿದ್ರಿ ಉಪಸ್ಥಿತರಿದ್ದರು.