ಉಡುಪಿ: ವಿದೇಶದಿಂದ ಹಿಂದಕ್ಕೆ ಬಂದ ವೃದ್ಧರಿಗೆ ‘ಕೋವಿಡ್ 19’ ಶಂಕೆ? ಜಿಲ್ಲಾ ಆಸ್ಪತ್ರೆಗೆ ದಾಖಲು
ಉಡುಪಿ: ವೃದ್ಧರೊಬ್ಬರಿಗೆ ಕೊರೊನಾ ವೈರಸ್ (ಕೋವಿಡ್19) ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿನ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಕಳ ತಾಲ್ಲೂಕಿನ ಮುನಿಯಾಲಿನ ವೃದ್ಧರು ಮಗನನ್ನು ನೋಡಲು ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಮರಳಿದ ಬಳಿಕ ಕೆಮ್ಮು, ಉಬ್ಬಸ ಕಾಣಿಸಿಕೊಂಡಿದ್ದರಿಂದಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗಿಯ ಕಫದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಹಿಂದೆ ಆಸ್ತಮಾ, ಮಧುಮೇಹ ಹಾಗೂ ರಕ್ತದೊತ್ತಡವಿದ್ದ ಮಾಹಿತಿ ಸಿಕ್ಕಿದೆ. ವಿದೇಶಕ್ಕೆ ಹೋಗಿಬಂದ ನಂತರ ಅನಾರೋಗ್ಯ ಕಾಣಿಸಿಕೊಂಡಿರುವುದರಿಂದ ನಿಗಾ ವಹಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಕೊರೊನಾ ಸೋಂಕಿನಂತೆ ಕಾಣುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. |