ಮೇ 12 ರಂದು ದುಬೈನಿಂದ ಮಂಗಳೂರಿಗೆ ವಿಮಾನ: ಮನೆಯವರಿಗೆ ಪ್ರವೇಶವಿಲ್ಲ

ಮಂಗಳೂರು: ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿರುವ ರಾಜ್ಯದ ಕರಾವಳಿ ಭಾಗದ ಜನರನ್ನು ಹೊತ್ತ ಮೊದಲ ವಿಮಾನ ಎರಡು ದಿನ ಮುಂಚಿತವಾಗಿಯೇ ಅಂದರೆ ಇದೇ 12 ರಂದು ನಗರಕ್ಕೆ ಬರಲಿದೆ. ಮೊದಲು ಇದೇ 12ರಂದು ನಿಗದಿಯಾಗಿದ್ದ ದುಬೈ ಕರಾವಳಿಗರ ಏರ್ ಲಿಫ್ಟ್ ಅನ್ನು 14ಕ್ಕೆ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ದುಬೈನಿಂದ ಮಂಗಳೂರಿಗೆ ಬರುವ ಮೊದಲ ವಿಮಾನ ಮೊದಲಿನಂತೆ ಇದೇ 12 ಕ್ಕೆ ನಿಗದಿಪಡಿಸಲಾಗಿದೆ.

’ದುಬೈನಿಂದ ಮಂಗಳೂರಿಗೆ ಇದೇ 14ರ ಬದಲಿಗೆ 12ರಂದೇ ವಿಮಾನ ಸೇವೆ ಒದಗಿಸಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು‘ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್‌ ಮಾಡಿದ್ದಾರೆ.

ಇದೇ 12 ರಂದು ಸಂಜೆ 4.10ಕ್ಕೆ ದುಬೈನಿಂದ ಈ ವಿಮಾನ ಹೊರಡಲಿದ್ದು, ಭಾರತೀಯ ಕಾಲಮಾನದಂತೆ ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.

ಏರ್‌ ಇಂಡಿಯಾದ ಐಎಕ್ಸ್‌ 0384 ವಿಮಾನವು 180 ಜನರನ್ನು ದುಬೈನಿಂದ ಕರೆತರಲಿದೆ. ಇದರಿಂದಾಗಿ ದುಬೈನಲ್ಲಿರುವ ಕರಾವಳಿಯ ಜನರಲ್ಲಿ ಉಂಟಾಗಿದ್ದ ಆತಂಕ ನಿವಾರಣೆ ಆದಂತಾಗಿದೆ.

ಮೊದಲ ವಿಮಾನದಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು, ತುರ್ತು ವೈದ್ಯಕೀಯ ನೆರವಿನ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಇನ್ನೊಂದು ವಿಮಾನ ಶೀಘ್ರದಲ್ಲಿಯೇ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಅದರ ದಿನಾಂಕವನ್ನೂ ಇನ್ನೂ ನಿಗದಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ದುಬಾಯಿಯಿಂದ ಭಾರತೀಯರನ್ನು ಕರೆದುಕೊಂಡು  ವಿಮಾನ ಬರಲಿದೆ. ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಅಲ್ಲದೇ, ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ReplyForward

Leave a Reply

Your email address will not be published. Required fields are marked *

error: Content is protected !!