ಮೀನುಗಾರರ ಭುಜದ ಮೇಲೆ ಗನ್ ಇಟ್ಟು ಬೆಳೆ ಬೇಯಿಸಿಕೊಳ್ಳುವರು :ಭಟ್
ಉಡುಪಿ: ರಾಜ್ಯದ ಫಿಶ್‌ಮಿಲ್ ಕಂಪೆನಿ ಮಾಲೀಕರು ಬಡ ಮೀನುಗಾರರ ಭುಜದ ಮೇಲೆ ಗನ್ ಇಟ್ಟು ತಮ್ಮ ಬೆಳೆ ಬೇಯಿಸಿಕೊಂಡರೆಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿಂದು ಆರೋಪಿಸಿದರು. ದೇಶದಲ್ಲಿ ಒಟ್ಟು 58 ಫಿಶ್‌ಮಿಲ್‌ಗಳಿದ್ದು ಸುಮಾರು 22 ಫಿಶ್ ಮಿಲ್‌ಗಳು ಕರ್ನಾಟಕದಲ್ಲಿ ಕಾರ್ಯಚರಿಸುತ್ತಿದೆ.
ಕಳೆದ ಮೂರು ವರ್ಷಗಳಿಂದ ಈ ಫಿಶ್ ಮಿಲ್ ಕಂಪನಿಗಳು ಸರಕಾರಕ್ಕೆ ಪಾವತಿಸಬೇಕಾದ ಜಿಎಸ್ ಟಿ ಮತ್ತು ದಂಡ ಸೇರಿ ಒಟ್ಟು ಮೊತ್ತ 600 ಕೋಟಿ ರೂ. ಆಗುತ್ತದೆ .ಕೇವಲ ಕರ್ನಾಟಕದಿಂದ ರೂ 300 ಕೋಟಿ ರೂ ತೆರಿಗೆ ಹಣ ಪಾವತಿಸಬೇಕಿದ್ದು ಇದರಿಂದ ತಪ್ಪಿಸಿಕೊಳ್ಳಲು ಬಡ ಮೀನುಗಾರರಿಂದ ಪ್ರತಿ ಕೆಜಿಗೆ ನಾಲ್ಕು ರೂಪಾಯಿ ಹಣವನ್ನು ಕಡಿತಗೊಳಿಸಿ ತಮ್ಮ ಜೇಬಿಗೆ ಇಳಿಸಿಕೊಂಡಿದ್ದು ಇದನ್ನು ಬಡ ಮೀನುಗಾರರಿಗೆ ಹಿಂದಕ್ಕೆ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಭಟ್ ಆಗ್ರಹಿಸಿದರು.
ಫಿಶ್ ಮಿಲ್ ಮಾಲಕರು ಜಿಎಸ್‌ಟಿ ವಿರೋಧಿಸಿ ಒಂದು ತಿಂಗಳಿನಿಂದ ಫಿಶ್‌ಮಿಲ್‌ಗಳನ್ನು ಸ್ಥಗಿತಗೊಳಿಸಿ ನಿರಂತರವಾಗಿ ಧರಣಿ ಮಾಡುತ್ತಿದ್ದು, ಇದರ ಮಾಹಿತಿ ತಿಳಿದ ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಡ ಮೀನುಗಾರರ ಮೇಲಿನ ಕಾಳಜಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಚರ್ಚಿಸಿ ಅದನ್ನು ಸಂಪೂರ್ಣವಗಿ ವಿನಾಯಿತಿ ಗೊಳಿಸಿದ್ದಾರೆ.ಅದಕ್ಕಾಗಿ ಶಾಸಕ ರಘುಪತಿ ಭಟ್ ವಿತ್ತ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಫಿಶ್‌ಮಿಲ್ ಕಂಪೆನಿ ಮಾಲೀಕರು ಮೀನುಗಾರರಿಂದ ಜಿಎಸ್‌ಟಿ ಪಾವತಿಸಬೇಕಿದೆಂದು 4 ರೂ ಕಡಿಮೆ ದರದಲ್ಲಿ ಮೀನು ಖರೀದಿಸಿದ್ದು ಬಡ ಮೀನುಗಾರರಿಂದ ವಸೂಲಾದ ಹಣವನ್ನು ತಕ್ಷಣ ಹಿಂದಕ್ಕೆ ನೀಡಬೇಕೆಂದು ಗೋಷ್ಠಿಯಲ್ಲಿ ಆಗ್ರಹಿಸಿದರು. ತಮ್ಮ ಫಿಶ್ ಮಿಲ್ ಕಂಪೆನಿಯನ್ನು ಸ್ಥಗಿತಗೊಳಿಸಿ ಮೀನುಗಾರರ ಭುಜದ ಮೇಲೆ ಗನ್ ಇಟ್ಟು ಸರಕಾರವನ್ನು ಹೆದರಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಆರೋಪ ಮಾಡಿದರು. ಈ ತೆರಿಗೆ ವಿನಾಯಿತಿಯಿಂದ ಫಿಶ್ ಮಿಲ್ ಮಾಲಕರು ಬಹಳಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ. ಫಿಶ್‌ಮಿಲ್ ಮಾಲಕರು ಕೋಟ್ಯಂತರ ಬೆಲೆಬಾಳುವ ಐಶಾರಾಮಿ ಕಾರುಗಳಲ್ಲಿ ತಿರುಗುವ ಇವರು ತೆರಿಗೆ ಕಟ್ಟಲು ಅಸಮರ್ಥರಲ್ಲ. ಜಿಎಸ್‌ಟಿ ಕಡಿತದಿಂದ ಮಾಲಕರಿಗೆ ಸಾಕಷ್ಟು ಲಾಭವಾಗಿದ್ದು, ಬಡ ಮೀನುಗಾರರ ಹಿತದೃಷ್ಟಿಯನ್ನಿಟ್ಟುಕೊಂಡು ಈ ವಿನಾಯಿತಿಯನ್ನು ಮಾಡಲಾಗಿದೆ ಎಂದರು.