ಜೂನ್ 1 ರಿಂದ ಮೀನುಗಾರಿಕೆ ನಿಷೇಧ

ಕಡತ ಚಿತ್ರ

ಉಡುಪಿ: ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ ಉಡುಪಿ
ಜಿಲ್ಲೆಯನ್ನು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ
ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ (ಉಭಯ ದಿನಗಳು ಸೇರಿ) ಒಟ್ಟು 61 ದಿನಗಳ ನಿಷೇದವನ್ನು ಹೇರಿ ಆದೇಶ ಹೊರಡಿಸಿದೆ.


ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯ ವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ / ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿಸಿದೆ. ಅಲ್ಲದೆ ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯವು ಆದೇಶದಂತೆ ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳ ವಿಶೇಷ ಆರ್ಥಿಕ ವಲಯದ (12 ರಿಂದ 200 ನಾಟಿಕಲ್ ಮೈಲಿ) ಜಲಪ್ರದೇಶದಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಮೀನುಗಾರಿಕೆ ನಿಷೇದವನ್ನು ಹೇರಿ ಏಕರೂಪದ ಮೀನುಗಾರಿಕೆ ನಿಷೇದವನ್ನು ಜಾರಿಗೊಳಿಸಿದೆ.


ಮೀನುಗಾರಿಕೆ ನಿಷೇದಿಸಿದ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಈ ಆದೇಶವನ್ನು ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು
ಹೊರಡಿಸಲಾಗಿರುವುದರಿಂದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕಾ ಉಪನಿರ್ದೇಶಕರು, ಉಡುಪಿ ಅವರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!