ದಂಡ, ದಂಡ ಗಂಡಾಂತರ
ನವದೆಹಲಿ: ನೂತನ ಸಂಚಾರಿ ನಿಯಮದ ಪ್ರಕಾರ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಓವರ್ಲೋಡ್ ನಿಯಮದನ್ವಯ ಟ್ರಕ್ ಮಾಲೀಕನಿಗೆ ಬರೊಬ್ಬರಿ 1.41 ಲಕ್ಷ ರೂ ದಂಡ ವಿಧಿಸಿದ್ದಾರೆ.
ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರಿ ದಂಡ ತೆತ್ತು ಸುದ್ದಿಯಾಗಿದ್ದರು. ಈ ಹಿಂದೆ ಒಡಿಶಾದಲ್ಲಿ ಹಾಕಲಾಗಿದ್ದ 80 ಸಾವಿರ ರೂ ದಂಡವೇ ವೈಯುಕ್ತಿಕ ಗರಿಷ್ಠ ದಂಡ ಪ್ರಕರಣವಾಗಿತ್ತು. ಆದರೆ ಇದೀಗ ಅದನ್ನೂ ಮೀರಿಸುವಂತೆ ರಾದಲಸ್ಥಾನ ಮೂಲದ ಟ್ರಕ್ ಡ್ರೈವರ್ ಒಬ್ಬನಿಗೆ ಪೊಲೀಸರು ಬರೊಬ್ಬರಿ 1.41 ಲಕ್ಷ ರೂ. ದಂಡ ವಿಧಿಸಿದ್ದಾರೆ.
ರಾಜಸ್ಥಾನದ ಬಿಕಾನೇರ್ನ ಹರ್ಮಾನ್ ರಾಮ್ ಭಾಂಬು ಎಂಬ ಟ್ರಕ್ ಮಾಲಿಕನಿಗೆ ಟ್ರಕ್ ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್ಲೋಡ್ ನಿಯಮದನ್ವಯ ದಂಡ ವಿಧಿಸಲಾಗಿದೆ. ‘ಸೆಪ್ಟೆಂಬರ್ 5 ರಂದು ದೆಹಲಿ ಪೊಲೀಸರು ದಂಡ ವಿಧಿಸಿ ಟ್ರಕ್ ವಶಕ್ಕೆ ಪಡೆದಿದ್ದರು. ಇಷ್ಟು ದುಬಾರಿ ಮೊತ್ತವನ್ನು ಹೊಂದಿಸಲು 5 ದಿನವೇ ಬೇಕಾಯಿತು. 5 ದಿನದ ನಂತರ ಸೆಪ್ಟೆಂಬರ್ 9 ರಂದು ಕೋರ್ಟ್ನಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದೇವೆ ಎಂದು ಟ್ರಕ್ ಮಾಲಿಕ ತಿಳಿಸಿದ್ದಾರೆ.
ಈ ಕುರಿತಂತೆ ಟ್ರಕ್ ಮಾಲೀಕ ಪೊಲೀಸರು ನೀಡಿದ್ದ ಚಲನ್ ಅನ್ನು ಮಾಧ್ಯಮಕ್ಕೆ
ತೋರಿಸಿದ್ದು, ಈ ಸುದ್ದಿ ಇದೀಗ ವ್ಯಾಪಕ ವೈರಲ್ ಆಗಿದೆ. ಟ್ರಕ್ನಲ್ಲಿ ನಿಯಮಕ್ಕಿಂತ ಹೆಚ್ಚಿಗೆ ತುಂಬಿಸಲಾಗಿದ್ದ ಸರಕಿಗೆ ಮೊದಲ ಒಂದು ಟನ್ಗೆ 20 ಸಾವಿರ ಮತ್ತು ಆ ನಂತರ ಪ್ರತಿಯೊಂದು ಟನ್ ಗೆ 2 ಸಾವಿರದಂತೆ ಓವರ್ ಲೋಡ್ ಮಾಡಿದ್ದಕ್ಕಾಗಿ ಒಟ್ಟು 48 ಸಾವಿರ ರೂ. ದಂಡ ವಿಧಿಸಲಾಗಿದೆ. ಜತೆಗೆ ಆರ್ಸಿ ಮತ್ತು ಪರ್ಮಿಟ್ ಇಲ್ಲದ್ದಕ್ಕಾಗಿ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಎಲ್ಲಾ ಸೇರಿ ಡ್ರೈವರ್ಗೆ 70,800 ರೂ. ಮತ್ತು ಇಷ್ಟೇ ಮೊತ್ತದ ದಂಡವನ್ನು ಟ್ರಕ್ ಮಾಲಿಕನಿಗೆ ವಿಧಿಸಲಾಗಿದೆ. ಹೀಗಾಗಿ ದಂಡದ ಒಟ್ಟು ಮೊತ್ತ 1,41,600 ರೂ. ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.