ಡಿಸೆಂಬರ್ 1 ರಿಂದ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ: ಜಗದೀಶ್
ಉಡುಪಿ:: ಡಿಸೆಂಬರ್ 1 ರಿಂದ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗಳಲ್ಲಿ ಸಹ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದ್ದು, ಫಾಸ್ಟ್ ಟ್ಯಾಗ್ ಸೌಲಭ್ಯ ಪಡೆಯದ ವಾಹನಗಳು ನಿಗಧಿತ ಟೋಲ್ ಶುಲ್ಕದ ಎರಡು ಪಟ್ಟು ಟೋಲ್ ಶುಲ್ಕ ನೀಡಬೇಕಾಗುತ್ತದೆ ಎಂದು ತಿಳಿಸಿದ ಡಿಸಿ, ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಎಲ್ಲಾ ಟೋಲ್ ಗಳಲ್ಲಿ ಮತ್ತು ಸಂಬಂದಿಸಿದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳಲ್ಲಿ ಪಡೆಯಬಹುದಾಗಿದೆ ಎಂದು ಹೇಳಿದರು.
ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸುವುದರಿಂದ ಟೋಲ್ ಗಳಲ್ಲಿ ಹಣ ನೀಡದೇ ಸಂಚರಿಸಬಹುದಾಗಿದ್ದು, ಟೋಲ್ ಗಳಲ್ಲಿ ವಾಹನಗಳ ನಿಲುಗಡೆ ದಟ್ಟಣೆ ಕಡಿಮೆಯಾಗಲಿದೆ,ಪ್ರತಿ ಟೋಲ್ ಸಂಚಾರ ಕುರಿತು ಮೊಬೈಲ್ ಗೆ ಎಸ್.ಎಂ.ಎಸ್ ಸಹ ಬರಲಿದೆ ಎಂದು ಹೇಳಿದರು.
ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನ ಟೋಲ್ ಬಳಿ ಬಂದ ಕೂಡಲೇ ವಾಹನಕ್ಕೆ ಅಂಟಿಸಿರುವ ಸ್ಟಿಕರ್ ನ ಬಾರ್ ಕೋಡ್ ಸ್ಕ್ಯಾನ್ ಆಗಿ , ಸಂಬಂದಪಟ್ಟ ವಾಹನದ ಮಾಲೀಕನ ಬ್ಯಾಂಕ್ ಖಾತೆಯಿಂದ ನಿಗಧಿತ ಟೋಲ್ ಶುಲ್ಕ ಕಡಿತಗೊಳ್ಳುವ ಮೂಲಕ ಟೋಲ್ ಶುಲ್ಕ ಪಾವತಿಯಾಗಲಿದ್ದು, ಶೇ.2.5 ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯ ಸಹ ಲಭಿಸಲಿದೆ.
ಫಾಸ್ಟ್ ಟ್ಯಾಗ್ ಅಳವಡಿಸಲು ವಾಹನಗಳ ಮಾಲೀಕರು ತಮ್ಮ ವಾಹನದ ಆರ್.ಸಿ. ಆಧಾರ್‍ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್ ನೊಂದಿಗೆ ನೊಂದಣಿ ಮಾಡಬೇಕಿದ್ದು, ಈ ಸೌಲಭ್ಯವು ಎಲ್ಲಾ ಟೋಲ್ ಗಳಲ್ಲಿ ಮತ್ತು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳಾದ ಆಕ್ಸಿಸ್ ಬ್ಯಾಂಕ್, ಹೆ.ಚ್.ಡಿ.ಎಫ್.ಸಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪೇಟಿಎಂ, ಎಸ್.ಬಿ.ಐ., ಬ್ಯಾಂಕ್ ಆಫ್ ಬರೋಡಾ, ಸಿಟಿ ಯೂನಿಯನ್ ಬ್ಯಾಂಕ್, ಈಕ್ವಟೋಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ , ಫೆಡರಲ್ ಬ್ಯಾಂಕ್ , ಐ.ಸಿ.ಐ.ಸಿ.ಐ ಬ್ಯಾಂಕ್ , ಐ.ಡಿ.ಎಫ್.ಸಿ ಬ್ಯಾಂಕ್ , ಇಂಡಸ್ ಲ್ಯಾಂಡ್ ಬ್ಯಾಂಕ್ , ಕರೂರು ವೈಶ್ಯ ಬ್ಯಾಂಕ್ , ಕೋಟಕ್ ಮಹೀಂದ್ರಾ ಬ್ಯಾಂಕ್ , ಪಂಜಾಬ್ ನ್ಯಾಷನಲ್ ಬ್ಯಾಂಕ್ , ಸೌತ್ ಇಂಡಿಯನ್ ಬ್ಯಾಂಕ್ ಗಳಲ್ಲಿ ಲಭ್ಯವಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಆರ್.ಟಿ.ಓ ರಾಮಕೃಷ್ಣ ರೈ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ರಮೇಶ್ ಬಾಬು, ನವಯುಗದ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.