ಕಷ್ಟ ಪಡಲೆಂದೇ ಕೃಷಿಕರು ಹುಟ್ಟಿಲ್ಲ:ರಾಮಕೃಷ್ಣ ಶರ್ಮ ಬಂಟಕಲ್ಲು
ಉಡುಪಿ: ಅವೈಜ್ಞಾನಿಕ ಕ್ರಮಗಳಿಂದ ಕೃಷಿ ಮಾಡಿದರೆ 75% ಖರ್ಚು, 25% ಲಾಭ ಬರುತ್ತದೆ. ಇದು ವರ್ಷಪೂರ್ತಿ ಚಿಂತೆಗೆ ಕಾರಣ. ಜೊತೆಗೆ ಪ್ರಕೃತಿ ವಿಕೋಪ, ಸರಕಾರ-ಅಧಿಕಾರಿಗಳ ಅಸಹಕಾರ ನಡುವೆಯೂ ಸಾಲ ಮಾಡಿ ಕೃಷಿಗಿಳಿದವರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ. ವೈಜ್ಞಾನಿಕ ಕ್ರಮಗಳಿಂದ ಕೃಷಿ ಮಾಡಿದರೆ ಹೆಚ್ಚು ಕಷ್ಟಪಡದೆ 25% ಖರ್ಚು, 75% ಲಾಭ ಬರುತ್ತದೆ. ವೈಜ್ಞಾನಿಕ ಕೃಷಿ ಎಂದರೆ ಕೃಷಿ ಬೆಳೆಗಳಿಗೆ ಯಾವಾಗ ಏನು ಬೇಕೊ ಅಷ್ಟನ್ನೆ ಒದಗಿಸಿ ನಂತರ ಇತರ ಉದ್ಯೋಗಿಗಳಂತೆ ಆರಾಮವಾಗಿ ಇರುವುದು. ಹೊರತು ನಮ್ಮ ಮನಬಂದಂತೆ ಕೃಷಿ ನಿರ್ವಹಣೆಗೆ ದಿನದ 20 ಗಂಟೆ ಕೃಷಿಯ ಹಿಂದೇ ಇರುವುದಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಹೇಳಿದರು. ಅವರು ಉಡುಪಿ ಜಿಲ್ಲಾ ಕೃ಼ಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಪೆರಂಪಳ್ಳಿ ಶ್ರೀ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಆಯೋಜಿಸಿದ ರೈತ ದಿನಾಚರಣೆ ಮತ್ತು ಕೃಷಿಕರ ಸನ್ಮಾನ ಕಾರ್ಯಕ್ರಮದಲ್ಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನಬದ್ಧ ಹೋರಾಟ, ಪ್ರತಿಭಟನೆ ಮೂಲಕ ಕೃಷಿಕರ ಸಂಕಷ್ಟಗಳ ಪರಿಹಾರಕ್ಕೆ ಜಿಲ್ಲಾ ಕೃಷಿಕ ಸಂಘ ಬದ್ಧವಿದೆ ಎಂದರು.
ಈ ಕಾರ್ಯಕ್ರಮವನ್ನು ಹಿರಿಯ ಪ್ರಗತಿಪರ ಕೃಷಿಕ ಆಲ್ಬರ್ಟ್ ಡಿಸೋಜಾ ಉದ್ಘಾಟಿಸಿದರು . ರೈತರು ತಮ್ಮ ಮಕ್ಕಳಿಗೆ ಗುರುಹಿರಿಯರಿಗೆ ಗೌರವ, ಅನ್ಯರಿಗೆ ಸಹಕಾರ-ಸಹಾಯ ನೀಡುವಂತಹ ಸಂಸ್ಕಾರ, ಸಂಸ್ಕೃತಿ ತಿಳಿಯಹೇಳಬೇಕು- ಟಿ.ವಿ., ಮೊಬೈಲ್, ಕುರ್ಕುರೆ, ಮಿಕ್ಸರ್ ಸಂಸ್ಕೃತಿ ಬೇಡ ಎಂದು ಜಿಲ್ಲಾ ಕೃಷಿಕ ಸಂಘದ ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು. ಪೆರಂಪಳ್ಳಿಯ ಹಿರಿಯ ಕೃಷಿಕ ಅಂತಪ್ಪ ಪೂಜಾರಿ, ಲಲಿತಾ ಎಸ್ ಪಾಲನ್ ಮೂಡುಪೆರಂಪಳ್ಳಿ, ಹೆಲೆನ್ ಪಿಂಟೋ, ಪ್ರೇಮ ಪೂಜಾರಿ, ಜಯಕುಮಾರ್ ಶೀಂಬ್ರ, ರಾಫಾಯಿಲ್ ಡಿಸೋಜಾ, ಶಂಕರ ಕೋಟ್ಯಾನ್, ಪೀಟರ್ ಡಿಸೋಜಾ, ಬೆನೆಡಿಕ್ಟ್ ಪೆರಂಪಳ್ಳಿ, ಪೆರಂಪಳ್ಳಿ ಶಶಿಧರ ರಾವ್, ಮಾಜಿ ನಗರಸಭಾ ಸದಸ್ಯ ರಾಘವೇಂದ್ರ ಭಟ್ (ಪುಟ್ಟ), ರವೀಂದ್ರ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಪೆರಂಪಳ್ಳಿ ವಲಯದ ಹಿರಿಯ ಹಾಗೂ ಪ್ರಗತಿಪರ ಕೃಷಿಕರಾದ ಮೇಲ್ಕೋಡಿ ಪಟ್ಣ ಅಲ್ಬಟ್ ಡಿಸೋಜಾ, ವಿಠಲ(ಕುಂಬು)ಪೂಜಾರಿ ಹಾಡಿಮನೆ, ಬೀಚು ಪೂಜಾರಿ ಪೆರಂಪಳ್ಳಿ ಮೇಲ್ಮನೆ, ಚಿತ್ತು ಪೂಜಾರಿ ಮದಗ ಇವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕೃಷಿಕರ ಮನೆಗೆ ತೆರಳಿ ಸನ್ಮಾನ ; ಹಿರಿಯ ಕೃಷಿಕರಾದ ಶೀನ ಮೂಲ್ಯ, ಗಿರಿಜಾ ಪೂಜಾರಿ ಮೇಲ್ಕೋಡಿಪಟ್ಣ, ಮೆರ್ಶಿನ್ ಡಿಸೋಜಾ ಆಚಾರಿಬೆಟ್ಟು, ನರ್ಸಿ ಪೂಜಾರಿ ಅಂಬಡೆಬೆಟ್ಟು, ಶ್ರೀನಿವಾಸ ಮಂಡೀಚ ಮೂಡುಪೆರಂಪಳ್ಳಿ ಇವರುಗಳನ್ನು ಅವರುಗಳ ಮನೆಗಳಿಗೇ ತೆರಳಿ ಸನ್ಮಾನಿಸಲಾಯಿತು.
ರವೀಂದ್ರ ಪೂಜಾರಿ ಶೀಂಬ್ರ, ಕಾರ್ಯಕ್ರಮ ನಿರ್ವಹಣೆ ಮಾಡಿ, ಧನ್ಯವಾದವಿತ್ತರು.