ಮಿತಿಮೀರಿದ ಪೊಲೀಸ್ ದೌರ್ಜನ್ಯ: ಜನರ ವ್ಯಾಪಕ ಆಕ್ರೋಶ
ಕೊರೋನಾ ವೈರಸ್ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮೋದಿ ಸರಕಾರ ಭಾರತ ಬಂದ್ ಗೆ ಆದೇಶಿಸಿರುವುದು ಸ್ವಾಗತಾರ್ಹ. ಇದು ಅನಿವಾರ್ಯವೂ ಆಗಿತ್ತು. ಜವಾಬ್ದಾರಿಯುತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪನವರಾಗಲಿ ಭಾರತ ಬಂದ್ ಗೆ ಆದೇಶಿಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಆದರೆ, ಹೀಗೊಂದು ಆದೇಶ ಮಾಡುವ ಅದೇ ಸಂದರ್ಭದಲ್ಲಿ ಬಂದ್ ಆದೇಶದಿಂದ ದೇಶಾದ್ಯಂತ ಉದ್ಭವಿಸಬಹುದಾದ ಗಂಭೀರ ಸಮಸ್ಯೆಗಳ ಬಗ್ಗೆ, ಜನರಸಂಕಷ್ಟಗಳ ಕುರಿತು ಮುಂದಾಗಿಯೇ ಯೋಚಿಸಿ ಪರ್ಯಾಯ ಪರಿಹಾ ರೋಪಾಯಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸಿದರೆ ಆಗ ಅದನ್ನು ದಕ್ಷತೆ ಎನ್ನಬಹುದು. ಆರಂಭದಲ್ಲಿಯೇ ವಿಮಾನ ನಿಲ್ದಾಣದಲ್ಲಿ ಬೇಜವಾಬ್ದಾರಿ ಮೆರೆದ ಪ್ರಧಾನಿ ಮೋದಿಯವರು, ಎರಡನೇ ಹಂತದಲ್ಲಿಯೂ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಇದಕ್ಕೆ ಹೊಣೆಗಾರರೇ. ಕೊರೋನಾ ಬರುತ್ತೋ ಬಿಡುತ್ತೋ ಒತ್ತಿಟ್ಟಿಗಿರಲಿ. ಮನೆಯಲ್ಲಿರುವವರಾದರೂ ಒಂದು ಹೊತ್ತಿನ ಊಟ ಮಾಡಬೇಕಲ್ಲ? ಅಗತ್ಯ ಔಷಧಗಳನ್ನು ಖರೀದಿಸಲು ಮೆಡಿಕಲ್ ಗಳಿಗೆ ಹೋಗಲೇಬೇಕಲ್ಲ ? ಅನಾರೋಗ್ಯಕ್ಕೆ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್ ಗಳಿಗೆ ಹೋಗಬೇಕಲ್ಲ ? ಆಹಾರಧಾನ್ಯ, ತರಕಾರಿಗಾಗಿ ಪೇಟೆಗೆ ಹೋಗಲೇ ಬೇಕಲ್ಲ ? ರಸ್ತೆಯಲ್ಲಿ ಬಂದವರಿಗೆಲ್ಲ ಪೊಲೀಸರು ಲಾಠಿಯಲ್ಲಿ ಹೊಡೆಯೋದು ಎಂದರೇನು ? ಏನಾದರೂ ಅರ್ಥವಿದೆಯೇ ಇದಕ್ಕೆ ? ಮಾನವನ ಗೌರವ ಮತ್ತು ಘನತೆಯ ಬದುಕಿನ ಮೇಲೆಯೇ ಸಾರ್ವಜನಿಕವಾಗಿ ಅಮಾನವೀಯವಾಗಿ ದಾಳಿ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು ? ಬೇಕಾದರೆ ಮನೆಯಿಂದ ಹೊರಗೆ ಬಂದವರ ಮೇಲೆ ಕೇಸು ದಾಖಲಿಸಿ, ಜೈಲಿಗೆ ಬೇಕಾದರೂ ಹಾಕಿ. ಅದು ಬಿಟ್ಟು ದೈಹಿಕ ಹಲ್ಲೆ ನಡೆಸುವುದು ಎಂದರೆ, ಇದು ರಾಕ್ಷಸೀಯ ನಡೆಯೇ ಸರಿ. ಪೊಲೀಸರು ಕಾನೂನು ಬದ್ಧವಾಗಿ ಕೆಲಸ ಮಾಡಬೇಕೇ ಹೊರತು ರೌಡಿಗಳಂತೆ ವರ್ತಿಸುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲಾಗದು. ಯಾರೊಬ್ಬರೂ ಜೀವನದ ಅವಶ್ಯಕತೆಗಳಿಗೆ ಮನೆಯಿಂದ ಹೊರಬರಲೇಬಾರದು ಎಂದಿದ್ದರೆ, ಮನೆ ಮನೆಗಳಿಗೂ ಕುಟುಂಬದ ಅಗತ್ಯವನ್ನು ಪೊಲೀಸರೆ ತಲುಪಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಸಾಧ್ಯವೇ ? ಸಾಧ್ಯ ಎಂದಾದರೆ, ಇದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಂಡು ಬಹಿರಂಗಪಡಿಸಿ. ಇಲ್ಲ, ಸಾಧ್ಯವಿಲ್ಲ ಎಂದಾದರೆ, ಇನ್ನಾದರೂ ಮನುಷ್ಯರಂತೆ ನಡೆದುಕೊಳ್ಳಲು ಕಲಿಯಿರಿ. ಮಾಡಿದ ಅಕ್ಷಮ್ಯ ಅಪರಾಧಕ್ಕೆ ಪರಿಹಾರೋಪಾಯಗಳನ್ನು ನೀವುಗಳೇ ಕಂಡುಕೊಂಡು ಅದನ್ನು ಮಾಡಿ. ವಿದೇಶದಿಂದ ಮೋದಿಯವರ ಅಧೀನದಲ್ಲಿರುವ ವಿಮಾನ ನಿಲ್ದಾಣಗಳ ಮೂಲಕ ಬಂದ ಕೊರೋನಾಕ್ಕಿಂತ ನಮ್ಮ ದೇಶದ ಪೊಲೀಸರೇ ನಮಗೆ ದೊಡ್ಡ ಕೊರೋನಾ ಭೂತವಾಗಿ ಪರಿಣಮಿಸಿದ್ದಾರೆ ಎಂದು ಜನರು ಹೇಳದಂತೆ ನಡೆದುಕೊಳ್ಳಿ. ಪ್ರತಿಯೊಬ್ಬನಿಗೂ ಇಲ್ಲಿ ಘನತೆ ಮತ್ತು ಗೌರವದಿಂದ ಬದುಕುವ ಹಕ್ಕಿದೆ. ಕುಂದಾಪುರ, ಸಚ್ಚೆರಿಪೇಟೆ ಮತ್ತು ಇನ್ನೂ ಕೆಲವೆಡೆಗಳಲ್ಲಿ ನಡೆದ ಅಮಾನವೀಯ ಪೊಲೀಸ್ ದೌರ್ಜನ್ಯಗಳನ್ನು ನೋಡಿದಾಗ ಹೀಗೊಂದು ಬರೆಯುವ ಒತ್ತಡ ನನ್ನೊಳಗೆ ಮೂಡಿದ ಪರಿಣಾಮವೇ ಪ್ರತಿಭಟನಾ ಬರಹ. ✍️ ಶ್ರೀರಾಮ ದಿವಾಣ |
ನಾವೆಲ್ಲಾ ಕಾಯುತ್ತಿದೆವು ಏನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹೊಂದಿರುವ ಬುದ್ದಿಜೀವಿಗಳು ಯಾಕೆ ಸುಮ್ಮನಿದ್ದಾರ ಎಂದು .ಶುರುಮಾಡಿ sir ನಿಮ್ಮ ತುತ್ತೂರಿ ಜನ ಸತ್ತರೂ ಸರಕಾರವನ್ನು ಬೈಯ್ಯ ಬಹುದು ಕಠಿಣ ಕ್ರಮ ಕೈಗೊಂಡರೂ ಬೈಯ್ಯ ಬಹುದು ಅನಗತ್ಯ ಬೀದಿ ಸುತ್ತುವ ಚಟ ಇರುವವರಿಂದ ಎಲ್ಲರಿಗೂ ಸಮಸ್ಯೆ ಯಾಗಿದೆ ನಿಮ್ಮಂಥವರು ಇಂತ ಸಮಯದಲ್ಲಿ ಕಡಿಮೆ ವಸ್ತುಗಳಿಂದ ಹೇಗೆ ಜೀವನ ಸಾಗಿಸಬಹುದು ಎಂದು ತಿಳಿಸಿಕೊಡ ಬೇಕಾಗಿದೆ .ಸದ್ಯ ನಮ್ಮ ದೇಶ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ಇದೆ .ಇನ್ನು ಲದ್ದಿ ತಿನ್ನುವ ಬುದ್ದಿಜೀವಿಗಳು ಎಲ್ಲಾ ವಿಷಯಗಳಿಗೆ ಬಾಯಿಹಾಕಿ ಎಲ್ಲವನ್ನೂ ಬಿಗಡಾಯಿಸಿ ಪುಣ್ಯ ಕಟ್ಟಿಕೊಳ್ಳಿ
ಈಗಿನ ಸನ್ನಿವೇಶ ದಲ್ಲಿ ಪೋಲೀಸರ ಮೇಲೆ ಆರೋಪ ಹೊರಿಸುವ ಉಡುಪಿ ಜಿಲ್ಲೆಯ ಬು(ಲ)ದ್ಧಿವಂತರಲ್ಲಿ ಅತೀ ಬುದ್ಧಿವಂತ ಜನರೇ ಮೊದಲು ನಿಮ್ಮ ನಿಮ್ಮ ಕರ್ತವ್ಯವನ್ನು ಸರ್ಕಾರದ ನಿರ್ದೇಶನದಂತೆ ಸರಿಯಾಗಿ ಮಾಡಲು ಮುಂದಾಗಿ. ಕಡೆಗೆ ಇತರರನ್ನು ಟೀಕಿಸಲು ಮುಝದಾಗಿ. ” ಊರಿಗೆಲ್ಲ ಬುದ್ಧಿಹೇಳುವ ನೀವು ಒಲೆಗೇ ಉಚ್ಚೆಹೊಯ್ಯುವ ಕಾರ್ಯದಲ್ಲಿ ಏಕೆ ತೊಡಗಿಕೊಂಡಿದ್ದೀರಿ????