ಕೊರೊನಾದಿಂದಾಗಿ ಎಲ್ಲವೂ ಆನ್ಲೈನ್ ಮಯಾ…

ಕೊರೊನಾದಿಂದಾಗಿ ಎಲ್ಲವೂ ಒನ್‌ಲೈನ್’ ಆಗುವ ಸಂಭವಗಳು ಕಾಣುತ್ತಿವೆ. 21 ದಿವಸಗಳಿಗೆ ಲಾಕ್ ಆಗಿದ್ದ ಲಾಕ್‌ಡೌನ್ ಈಗ ಇನ್ನೂ ಮುಂದುವರಿದಿದೆ. ಲಾಕ್‌ಇನ್, ಸೀಲ್‌ ಡೌನ್‌ನ ಮಾತುಗಳೂ ಕೇಳಲಾರಂಭಿಸಿವೆ. ಯಾಕೆಂದರೆ ದೂರವಿರಿ’ ಎಂದಷ್ಟೂ ಕ್ಯಾರೇ ಅನ್ನದೇ ತಿರುಗಾಡುವವರು ಜಾಸ್ತಿಯಾಗಿದ್ದಾರೆ. ಸರಕಾರದ ಅನುಷ್ಟಾನಗಳನ್ನು ಜನರಲ್ಲಿ ಮೂಡಿಸಲು ಪೋಲಿಸರು ಅವಿರತ (ಸಾಕಷ್ಟು ಬಾರಿ ಲಾಠಿ ಅಥವಾ ಇತರೆ ಕ್ರಮಗಳಿಂದ) ಪ್ರಯತ್ನ ಪಡುತ್ತಿದ್ದರೇ; ಮಾಧ್ಯಮದವರೂ ಕೂಡಾ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದ್ದಾರೆ ತಮ್ಮ ಬರವಣಿಗೆಗಳಿಂದ ಮತ್ತು ಕಾರ್ಯಕ್ರಮಗಳಿಂದ.

ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಕಡೆ ಹೋಗಿ ಎಂದು ಪದೇ ಪದೇ ಸರಕಾರ ಅಂದರೂ; ಹೊರಕಡೆ ತಿರುಗಾಡಲೆಂದೇ ಅವಶ್ಯಕತೆಗಳನ್ನು ಹುಟ್ಟಿಸಿಕೊಳ್ಳುವುದರಲ್ಲಿ ನಾವೆಲ್ಲರೂ ನಿಸ್ಸೀಮರು ಬಿಡಿ. ಇದರಿಂದ ಆವಶ್ಯಕ ಕೆಲಸಗಳಿಗೆ ಹೊರಗೇ ಹೋದವರೂ ಸಹಾ ಲಾಠಿಯೇಟಿನ ರುಚಿಯನ್ನು ಪಡೆದಿದ್ದಾರೆ ಅಥವಾ ವಾಹನಗಳು ಜಪ್ತಿಯಾಗಿವೆ. ಅಷ್ಟರಲ್ಲಿ ದಿನಸಿಯಿಂದ ಹಿಡಿದು ತಿಂಡಿಯವರೆಗೆ ಎಲ್ಲವನ್ನೂ ‘ಒನ್‌ಲೈನ್’-ನಲ್ಲೇ ಆರ್ಡರ್ ಮಾಡಬೇಕೆನ್ನುವ ಆರ್ಡರ್ ಸಹಾ ಸರಕಾರದಿಂದ ಬಂದಿದೆ. ನಮಗೆ ಭಾರತೀಯರಿಗೆ ಕೆಟ್ಟ ಮೇಲೆ ಬುದ್ಧಿ ಬರುವುದು ಎಂಬುದನ್ನು ಸಾಕಷ್ಟು ಬಾರಿ ಸಾಧಿಸಿ ತೋರಿಸಿದ್ದೇವೆ. ಈ ಮಹಾಮಾರಿಯನ್ನು ತೊಲಗಿಸಲು ಇನ್ನೆಂತೆಲ್ಲಾ ಸರ್ಕಸ್‌ಗಳನ್ನು ಮಾಡಬೇಕಾದಿತೋ ಆ ದೇವರೇ ಬಲ್ಲ. ಈಗ ವಿಶಯ ಅದಲ್ಲ; ಈ ಲಾಕ್‌ಡೌನ್‌ನಿಂದ ಜನಸಾಮಾನ್ಯರ ಪಾಡೇನು..? ಸರಕಾರಿ, ಖಾಸಗಿ ಮತ್ತು ಅರೆಕಾಲಿಕ ನೌಕರರ, ಕೂಲಿಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ಎಂತಹ ಪರಿಣಾಮ ಬೀರಿದೆ ನೋಡುವ..ಸರಕಾರಿ ನೌಕರಿ ಅಂದರೆ ಪುಗ್ಸಟ್ಟೆ ಸಂಬಳ ಸಿಗುವ ಕಾಯಕ ಎಂದು ಎಲ್ಲರೂ ಅನಿಸುವುದಿದೆ. ಅದು ಖಂಡಿತ ನಿಜವಲ್ಲ, ಕೆಲವೊಂದು ಕಡೆ ಕೇವಲ ಕುರ್ಚಿ ಬಿಸಿ ಮಾಡಿ ಸಂಬಳ ತೆಗೆದುಕೊಳ್ಳುವವರು, ಸಂಬಳಕ್ಕಿಂತ ಹತ್ತು ಪಟ್ಟು ಗಿಂಬಳ ಸಂಪಾದಿಸುವವರೂ ಸಹಾ ಇದ್ದಾರೆ. ಇದೂ ಸುಳ್ಳಲ್ಲಾ. ಆದರೆ ನೌಕರಿಯಲ್ಲಿರುವ ಖಾತರಿ ಹಾಗೂ ಕ್ಲಪ್ತ ಸಮಯದಲ್ಲಿ ಕೈ ತುಂಬಾ ಸಂಬಳವೇ ಸರಕಾರಿ ನೌಕರಿಯ ಕಿಮ್ಮತ್ತನ್ನೂ ದುಪ್ಪಟ್ಟುಗೊಳಿಸಿದೆಯಾದರೂ ಈಗ ಅವರ ಸೇವೆಯು ತುಂಬಾ ಅವಶ್ಯಕವಾದುದರಿಂದ ಖಾಸಗಿಯವರು ರಜೆಯನ್ನು ಆನಂದಿಸುತ್ತಿದ್ದರೆ ಇವರು ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ ಅಂದರೆ ಸುಳ್ಳಾಗದು.

ಅದರಲ್ಲೂ ಪೋಲಿಸರ ಪಾಡಂತೂ ಯಾರಿಗೂ ಬೇಡ. ಇವರ ಕೈಯಲ್ಲಿರುವ ಲಾಠಿ ನೋಡಿ ಕೊರೊನಾ ಇವರ ಬಳಿ ಸುಳಿಯದೆ ಓಡಿಹೋಗುತ್ತದೆ ಅನ್ನುವಂತೆ ‘ಬುದ್ಧಿ’ ಇಲ್ಲದವರಿಗೆ ಬುದ್ಧಿ ಕಲಿಸಲು ದಿನದ ೨೪ ಘಂಟೆಯೂ ಸಹ ದುಡಿಯುವ ಇವರ ಪಾಡು ನೋಡಿದರೆ ಅಯ್ಯೋ ಅನಿಸುತ್ತದೆ. ಖಾಸಗಿ ವೈದ್ಯರು ಕ್ಲಿನಿಕ್ ಬಂದ್ ಮಾಡಿ ಮಕಾಡೆ ಮಲಗಿದರೆ, ನಮ್ಮ ಜಿಲ್ಲೆಯಲ್ಲಿ ಸನ್ಮಾನ್ಯ ಡಿ.ಸಿ. ಯವರು ಎಬ್ಬಿಸಿದರೂ; ಇನ್ನೂ ಹಲವಾರು ಕಡೆ ಎದ್ದಿಲ್ಲ. ಅದರಲ್ಲೂ ಸರಕಾರಿ ವೈದ್ಯರು ಹಾಗೂ ವೈದ್ಯಕಿಯ ಶಿಬ್ಬಂಧಿಯವರು ಸಾವಿನೊಂದಿಗೆ ಸರಸವಾಡುತ್ತಿದ್ದಾರೆ. ಭಾರತವನ್ನು ಹಿಡಿದು, ಪ್ರಪಂಚದ ಎಲ್ಲಾ ದೇಶಗಳಲ್ಲಿ ಸಹಾ ‘ಕೊರೊನಾ’ ಇವರನ್ನೂ ಬಿಟ್ಟಿಲ್ಲಾ. ಕೆಲವೊಂದು ಆಸ್ಪತ್ರೆಗಳೂ ಸಹಾ ಮುಚ್ಚಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಇನ್ನೂ ಬ್ಯಾಂಕಿನ ಶಿಬ್ಬಂಧಿಗೂ ಧರ್ಮಸಂಕಟ. ಯಾಕೆಂದರೇ ಜನರಿಗೆ ಈ ಹೊತ್ತಲ್ಲಿ ಹಣದ ಅವಶ್ಯಕತೆ ಸಾಕಷ್ಟು ಇರುತ್ತದೆ; ಇಲ್ಲದವರೂ ಸಹಾ ತಿರುಗಾಡುವ ನೆಪದಲ್ಲಿ ಬ್ಯಾಂಕಿಗೆ ಭೇಟಿ ನೀಡುವುದುಂಟು. ಇಂತಹವರಿಗಾಗಿಯೇ ಕೆಲವು ‘ಕೊರೊನಾ’ ಚುಚ್ಚುಮದ್ದುಗಳನ್ನು ಇಟ್ಟರೂ ತಪ್ಪಾಗದು. ಮಾಧ್ಯಮದವರಿಗಂತೂ ಈಗ ಡಬಲ್ ಡ್ಯೂಟಿ. ಏನೇ ಇರಲಿ ಈವರೆಲ್ಲರ ಸೇವೆಯಂತೂ ನಿಜಕ್ಕೂ ಶ್ಲಾಘನೀಯ.

ಈ ಹೊತ್ತಲ್ಲಿ ನಿಜವಾಗಿಯೂ ತುಂಬಾ ಸಂಕಷ್ಟಗೀಡಾದವರೆಂದರೆ ದಿನಕೂಲಿ ಕಾರ್ಮಿಕರು. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದು; ತಲೆಯ ಮೇಲೆ ಸೂರಿಲ್ಲದೇ ಸರಿಯಾದ ನೆಲೆಯಿಲ್ಲದೆ ಬದುಕುವ ಇವರಂತೂ ಭಿಕ್ಷುಕರಿಗಿಂತ ಕಡೆಯಾದದ್ದು ಸುಳ್ಳಲ್ಲಾ. ದಾನಿಗಳು ಹಾಗೂ ಸರಕಾರ ಅವರಿಂದಾದ ಸಹಾಯ ಮಾಡುತ್ತಿದ್ದರೂ ಊಟ ಸಿಗದೇ ಪರದಾಡುವವರು ಇನ್ನೂ ಇದ್ದಾರೆ. ಬೀದಿನಾಯಿಗಳಿಗೂ ಈವರಿಗೂ ಯಾವುದೇ ವ್ಯತ್ಯಾಸವಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಈ ಪೀಡೆ ಬೆಳೆದುಬಿಟ್ಟಿದೆ. ಬೀದಿನಾಯಿಗಳಿಗೂ ಸಹಾ ಕೆಲವೊಂದು ಕಡೆ ಪೋಲಿಸರು ಹಾಗೂ ಚಿತ್ರನಟಿಯೊಬ್ಬರು ತಿಂಡಿ ಕೊಟ್ಟದ್ದು ಮಾನವೀಯತೆಯನ್ನು ಎತ್ತಿ ತೋರಿಸಿದೆ. ಕೆಲವೊಂದು ಕಡೆ ಖಾಸಗಿ ನೌಕರರಿಗೂ ಸಹಾ ಸಂಬಳದಲ್ಲಿ ಕಡಿತಗೊಂಡಿದ್ದರೆ, ಕೆಲವರಿಗೆ ಕೊರೊನಾ ಅಪಾಯದಲ್ಲೂ ಕೆಲಸ ಮಾಡುವ ಪರಿಸ್ಥಿತಿ ಇದೆ. ಅದರಲ್ಲೂ ಕ್ರಷಿಕರು, ಅಗತ್ಯ ಸೇವೆಯ ಪೂರೈಕೆದಾರರಿಗಂತೂ ಯಾವುದೇ ಬಿಡುವಿಲ್ಲಾ. ಆದರೆ, ಈ ಹೊತ್ತಲ್ಲಿ ಕೆಲಸ ಮಾಡದೇ, ಮನೆಯಲ್ಲೇ ಕೂತು ಸಂಬಳಗಿಟ್ಟಿಸಿಕೊಳ್ಳುವವನು ನಿಜಕ್ಕೂ ಅದ್ರಷ್ಟಶಾಲಿ ಅಂದರೇ ತಪ್ಪಾಗದು.

ಈಗ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಷಯಕ್ಕೆ ಬರೋಣ. ವ್ರತ್ತಿಪರ ಮತ್ತು ಡಿಗ್ರಿ ಶಿಕ್ಷಣ ವಿದ್ಯಾರ್ಥಿಗಳಿಗೆ ಫೆಬ್ರವರಿ ಯಿಂದ ಮೇ ತಿಂಗಳೆಂದರೆ ತುಂಬಾನೇ ಮುಖ್ಯ. ಅದರಲ್ಲೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದಿಲ್ಲಾ. ಅವರಿಗಾದರೋ ಒಂದು ವಾರ ಪುನರ್‌ಮನನ ತರಗತಿಗಳನ್ನು ನಡೆಸಿ ಪರೀಕ್ಷೆ ಕೊಡುವ ಅಭಯವನ್ನು ಸರಕಾರ ಕೊಟ್ಟಿದೆಯಾದರೇ; ಈ ವ್ರತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ‘ಒನ್‌ಲೈನ್’ ತರಗತಿಗಳನ್ನು ನಡೆಸಲು ಸರಕಾರ ನಿರ್ದೇಶನಗಳನ್ನು ನೀಡಿದೆ.ಕೆಲವರಿಗಂತೂ ಭಾರೀ ಉತ್ಸಾಹ; ಯಾಕೆಂದರೇ ಮನೆಯಲ್ಲೇ ಕೂತು; ಚಹಾ ತಿಂಡಿ ಸವಿದು, ಮನಸ್ಸಿದ್ದರೇ ಪಾಠ ಕೇಳುವುದು ಇಲ್ಲವಾದಲ್ಲಿ ಸೊಶಿಯಲ್ ಸೈಟ್‌ಗಳಲ್ಲಿ ಹರಟೆ ಹೊಡೆಯುವುದೋ ಅಥವಾ ಫಿಲ್ಮ್ ನೋಡುವುದೋ ಮಾಡಿದಾರಾಯಿತು. ಆಟೆಂಡನ್ಸ್ ಅಂತೂ ಸಿಕ್ಕೇ ಸಿಗುತ್ತದೆ. ಆದರೇ ಕಾಲೇಜು ಕಾರಿಡರ್‌ಗಳಲ್ಲಿಯೋ ಕ್ಯಾಂಟೀನ್‌ನಲ್ಲಿಯೋ ಹೆಗಲ ಮೇಲೆ ಕೈ ಹಾಕಿ ಹರಟೆ ಹೊಡೆಯುವುದು ತಪ್ಪಿದೆಯೆಂದು ಬೇಜಾರು ಮಾಡಿಕೊಳ್ಳುವವರೂ ಸಾಕಷ್ಟು ಜನ ಇದ್ದಾರೆ. ಪ್ರೆಮಿಗಳಿಗಂತೂ ಈಡೀ ದಿನ ‘ಒನ್‌ಲೈನ್’ ಚಾಟಿಂಗ್..

ಈಷ್ಟೆಲ್ಲಾ ಆಗುತ್ತಿರುವಾಗ, ನನ್ನಂತ ಬಡಪಾಯಿ ಶಿಕ್ಷಕನ ಪಾಡು ನೋಡಿ. ಒಂದು ಕಡೆ ನೆಟ್‌ವರ್ಕ್ ಹೊಂದಿಸಿಕೊಂಡು ‘ಒನ್‌ಲೈನ್’ ನಲ್ಲಿ ವಿದ್ಯಾರ್ಥಿಗಳು ಕಾಣದಿದ್ದರೂ ಕಾಣುವ ಹಾಗೆ ನಟಿಸಿ ಪಾಠ ಮಾಡಬೇಕು ಮಾತ್ರವಲ್ಲಾ ಅವರ ಕುಛೇಶ್ಟೆಗಳನ್ನು ಸಹಿಸಿಕೊಂಡು (ಯಾಕೆಂದರೇ ಯಾರು ಕುಛೇಶ್ಟೆ ಮಾಡುತ್ತಾರೆಂದು ಕಂಡುಹಿಡಿಯುವುದು ಸ್ವಲ್ಪ ಕಷ್ಟದ ಕೆಲಸ) ‘ಸಿಲೆಬಸ್’ ಪೂರ್‍ಣಗೊಳಿಸಬೇಕು. ಅದರಲ್ಲೂ ಶಿಕ್ಷಕರ ಮೇಲೆ ಕೋಪವಿದ್ದವರಂತೂ ಈಗ ಮುಗಿಬೀಳುತ್ತಿದಾರೆ, ಸ್ಕ್ರೀನ್ ಸ್ಕ್ರ್ಯಾಚ್ ಮಾಡಿಯೋ ಅಥವಾ ಅವಾಚ್ಯ ಶಬ್ದಗಳನ್ನು ಪ್ರಯೋಗ ಮಾಡಿಯೋ ಅವರ ಕೋಪವನ್ನು ತಣ್ಣಗಾಗಿಸುತ್ತಿದ್ದಾರೆ. ಇನ್ನೂ ಕೆಲವು ಶಿಕ್ಷಕರಿಗೆ ಈ ರೀತಿ ಕ್ಯಾಮೆರಾ ಮುಂದೆ ಪಾಠ ಮಾಡುವಾಗ ನಡುಕ ಬಂದು ವಿದ್ಯಾರ್ಥಿಗಳ ಮುಂದೆ ನಗೆಪಾಟಲಿಗೀಡಾಗಿದ್ದೂ ನಡೆದಿದೆಯಂತೆ. ಯಾಕೆಂದರೇ ಎಲ್ಲರೂ ನಟನೆಯಲ್ಲಿ ಹುಶಾರಿರುವುದಿಲ್ಲಾ ನೋಡಿ..! ಸರಿಯಾದ ನೆಟ್‌ವರ್ಕ್ ಸಿಗದಿವರಿಗೆ ಮಾತ್ರ ಇದೊಂದು ಅಗ್ನಿ ಪರೀಕ್ಷೆ; ಆಲಸಿಗಳೂ ಸಹಾ ಇದರ ದುರುಪಯೋಗಪಡಿಸಿಕೊಂಡದ್ದು ಇರಬಹುದು. ಏನೇ ಇರಲಿ ಈ ‘ಓನ್‌ಲೈನ್’ ಶಿಕ್ಷಣ ಕೆಲವರಿಗೆ ಶಿಕ್ಷೆಯೆಂದು ಅನಿಸಿದರೂ; ಬದಲಾದ ಸನ್ನಿವೇಶಗಳಿಗೆ ತಕ್ಕುದಾಗಿ ನಡೆಯಬೇಕಾದ ಪರಿಸ್ಥಿತಿ ಇವತ್ತು ಬಂದೊದಗಿದೆ.


ಇತ್ತಕಡೆ ಈ ಮುಂಚೇನೂ ಪ್ರೇಮಪ್ರಕರಣಗಳು ಒನ್‌ಲೈನ್‌ನಲ್ಲಿ ಸಂಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಶಯ. ಮುಂದಿನ ದಿನಗಳಲ್ಲಿ ಮದುವೆ ಮುಂಜಿಗಳೂ ಸಹಾ ಒನ್‌ಲೈನ್‌ನಲ್ಲೇ ಆದರೂ ಸಹಾ ಅತಿಶಯೋಕ್ತಿಪಡಬೇಕಾಗಿಲ್ಲ; ಮದುಮಗ ಒಂದೆಡೇ ಹಾಗೂ ಮದುಮಗಳು ಇನ್ನೊಂದೆಡೆ ಇದ್ದರೂ, ಜೂಮ್‌ಲ್ಲೋ, ಸ್ಕೈಪ್‌ಲ್ಲೋ ಒಂದೇ ಸ್ಕ್ರೀನ್‌ನಲ್ಲಿ ಮೂಡಿ ಕಂಕಣಭಾಗ್ಯ ಪಡೆದುಕೊಳ್ಳಬಹುದೇನೋ; ಆದರೇ ಮಕ್ಕಳಾಗಬೇಕಾದರೆ ಮಾತ್ರಾ ಲಾಕ್‌ಡೌನ್‌ನಿಂದ ಮುಕ್ತಿ ಸಿಗಲೇಬೇಕಲ್ಲವೇ..? ಆದಷ್ಟೂ ಬೇಗ ಕೊರೊನಾ ತೊಲಗಲಿ ಎಂದು ಆಶೀಸೋಣ. ಜೈ ಹಿಂದ್, ಜೈ ಭಾರತ್.

ಮೆಲ್ವಿನ್ ಪೆರ್ನಾಲ್, ಸಹಾಯಕ ಪ್ರಾಧ್ಯಪಕರು, ಯಾಂತ್ರಿಕ ವಿಭಾಗ, ನಿಟ್ಟೆ ಇಂಜಿನಿಯರಿಂಗ್ ಕಾಲೇಜು. (ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ: [email protected])

Leave a Reply

Your email address will not be published. Required fields are marked *

error: Content is protected !!