ದೇಶದ ಕಾನೂನಿನಿಗೆ ಎಲ್ಲರೂ ತಲೆಬಾಗಬೇಕು: ಉದ್ಯಾವರ ಮಾಧವ ಆಚಾರ್ಯ
ಉಡುಪಿ: ದೇಶದ ಬಗ್ಗೆ ಚಿಂತನೆ ಮಾಡುವ ಮೊದಲು ನಾವು ನಮ್ಮ ಸ್ಥಳೀಯ ಸೂಕ್ಷ್ಮ ಸಮಸ್ಯೆಗಳ ಕಡೆಗೆ ಗಮನಕೊಡಬೇಕು. ಅದಕ್ಕಾಗಿ ನಾವು ನ್ಯಾಯ ಸಮ್ಮತವಾದ ಹಾದಿಯಲ್ಲಿ ನಡೆಯಬೇಕು ಎಂದು ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಹೇಳಿದರು. ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಆಶ್ರಯದಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಲೆವೂರು ಗ್ರೂಪ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ದೇಶದ ಉದ್ಯೋಗ ಸಮಸ್ಯೆ, ಬೆಲೆ ಸಮಸ್ಯೆ, ಜೀವನ ಸಾಮರಸ್ಯ, ರಕ್ಷಣೆ ಸಮಸ್ಯೆ ಇಂದು
ಛಿದ್ರ ಛಿದ್ರವಾಗಿದೆ. ಹದಿಹರೆಯದ ಮಕ್ಕಳಲ್ಲೇ ಕ್ರೌರ್ಯ ಅಡಗಿದೆ. ಇದು ಇಂದಿನ ದುರಂತ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ದೇಶ ಸಮಸ್ಯೆಯನ್ನು ಪರಿಹರಿಸಲು
ಕಷ್ಟವಾಗುತ್ತದೆ. ಹಾಗಾಗಿ ನ್ಯಾಯ ಸಮ್ಮತವಾಗಿ ಬಾಳುವುದು ಇಂದಿನ ಅಗತ್ಯ ಎಂದರು.
ಮಕ್ಕಳ ಬಾಳು ಹಸಿರಾಗಬೇಕಾದರೆ ಅವರು ದೇಶದ ಉಸಿರಾಗಬೇಕು. ಅದಕ್ಕೆ ಜ್ಞಾನ ಸಂಪಾದನೆ ಮಾಡಬೇಕು. ಇದರಿಂದ ದೇಶ ಕಟ್ಟುವ ಕೆಲಸ ಮಾಡಬಹುದು. ಗುರುಗಳು ಮತ್ತು ಹಿರಿಯರು ಮಕ್ಕಳಿಗೆ ನ್ಯಾಯ ಮತ್ತು ಜ್ಞಾನದ ಪಾಠ ಹೇಳಿಕೊಡಬೇಕು. ಯಾವುದು ತಪ್ಪು, ಯಾವುದು ಸರಿ ಎಂಬುವುದರ ತಿಳುವಳಿಕೆ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು. ನ್ಯಾಯಕ್ಕೆ ಎಲ್ಲರೂ ತಲೆಬಾಗಬೇಕು ಕಾನೂನನ್ನು ಯಾರು ಅವರವರ ಕೈಗೆ ತೆಗೆದುಕೊಳ್ಳಬಾರದು. ಅದು ಎಷ್ಟು ದೊಡ್ಡ ಜಗದ್ಗುರು, ಧರ್ಮಗುರು ಆರಕ್ಷಕರೇ ಆಗಿರಬಹುದು. ಸಂವಿಧಾನ ಬದ್ಧವಾಗಿ ರೂಪಿತವಾಗಿರುವ ನ್ಯಾಯಕ್ಕೆ
ಎಲ್ಲರೂ ತಲೆಬಾಗಬೇಕು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಲ್ಯಾಣ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ
ವಿನ್ಸೆಂಟ್ ಆಳ್ವ, ಎಜುಕೇಶನ್ ಗ್ರೂಪ್‌ನ ಅಧ್ಯಕ್ಷ ಎ. ಗಣಪತಿ ಕಿಣಿ, ಶಾಂತಿ ಜಿ.
ಕಿಣಿ ಉಪಸ್ಥಿತರಿದ್ದರು. ಎಜುಕೇಶನ್ ಗ್ರೂಪ್‌ನ ಕಾರ್ಯದರ್ಶಿ ಹರೀಶ್ ಕಿಣಿ ಸ್ವಾಗತಿಸಿದರು. ಕೋಶಾಧಿಕಾರಿ ದಿನೇಶ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ರೂಪಾ ಡಿ. ಕಿಣಿ ವಾರ್ಷಿಕ ವರದಿ ಓದಿದರು. ಶ್ರೀನಿವಾಸ ಉಪಾಧ್ಯ ಮತ್ತು ಗಾಯತ್ರಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.