ಬಂಟ್ವಾಳ- ಪ್ರವಾಹದಿಂದ 25.82 ಲಕ್ಷ ಅಂದಾಜು ನಷ್ಟ
ಬಂಟ್ವಾಳ : ಪ್ರವಾಹದ ಹಿನ್ನಲೆಯಲ್ಲಿ ಭಾನುವಾರದ ವರೆಗೆ ನಷ್ಟದ ಪ್ರಮಾಣವನ್ನು 25.82 ಲಕ್ಷ ರೂ.ವನ್ನು ಅಂದಾಜಿಸಲಾಗಿದ್ದು,ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಸದ್ಯ ಭಾನುವಾರ ನೇತ್ರಾವತಿ ನದಿ 6.9 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಶನಿವಾರ ಬೆಳಗ್ಗೆ ನದಿ 11.6 ಮೀಟರ್ ಎತ್ತರಕ್ಕೆ ಪ್ರವಹಿಸಿ, ಬಂಟ್ವಾಳ ಪೇಟೆಯೆಡೆಗೆ ನುಗ್ಗಿತ್ತು.
ಪಾಣೆಮಂಗಳೂರು 115, ಬಂಟ್ವಾಳ ಕಸಬಾ 5, ಕಡೇಶ್ವಾಲ್ಯ 7, ಬರಿಮಾರು 3, ಅಮ್ಟಾಡಿ 16, ಬಿಮೂಡ 67, ಪುದು 18, ಸಜೀಪನಡು 22, ಪೆರ್ನೆ 10, ಸಜೀಪಮುನ್ನೂರು 4, ಮಣಿನಾಲ್ಕೂರು 3 ಸೇರಿದಂತೆ ಸುಮಾರು 400ರಷ್ಟು ಮನೆಗಳು ಪ್ರವಾಹಬಾಧಿತವಾಗಿದ್ದರೆ, ಶನಿವಾರ ರಾತ್ರಿವರೆಗೆ 1408 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಇವರಲ್ಲಿ 1360ರಷ್ಟು ಮಂದಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರೆ, 76 ಮಂದಿ ಬಂಟ್ವಾಳದ ಐಬಿ ಮತ್ತು ಪಾಣೆಮಂಗಳೂರಿನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರು.ಬಂಟ್ವಾಳ. ಬಿ.ಸಿ.ರೋಡ್ ನಿಂದ ಬರುವ ಎಲ್ಲ ರಸ್ತೆಗಳಿಂದಲೂ ಪೇಟೆಗೆ ಆಗಮಿಸಬಹುದು. ಶನಿವಾರ ಬಂದ್ ಆಗಿದ್ದ ಬಂಟ್ವಾಳ – ಬೆಳ್ತಂಗಡಿ ರಸ್ತೆ ಸಹಿತ ತಾಲೂಕಿನ ಇತರ ರಸ್ತೆಗಳೂ ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ.
ರಜೆಯಲ್ಲೂ ಕೆಲಸ : ಸಿಎಂ ಬಿಎಸ್ ವೈ ಸೂಚನೆಯ ಮೇರೆಗೆ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ರಜಾದಿನವಾದ ಭಾನುವಾರ ತಹಶೀಲ್ದಾರ್ ರಶ್ಮಿ ಎಸ್.ಆರ್.ಸಹಿತ ಕಂದಾಯ ಇಲಾಖೆಯ ಅಧಿಕಾರಿಗಳು,ಸಿಬಂದಿಗಳು ಕಚೇರಿಯಲ್ಲಿದ್ದು ಪ್ರಾವಾಹದ ನಷ್ಟದ ವಿವರ,ಇತರೆ ಕಾರ್ಯದಲ್ಲಿ ಮಗ್ನರಾಗಿದ್ದರು.ತಹಶೀಲ್ದಾರ್ ರಶ್ಮಿಯವರು ವಿವಿಧಡೆ ನೆರೆಪೀಡಿತದಿಂದ ಹಾನಿಗೊಳಗಾದ ಸ್ಥಳಕ್ಕು ಭೇಟಿ ನೀಡಿದ್ದರು. ಇತ್ತ ಸಿಬಂದಿಗಳು ಪ್ರಾಕೃತಿಕ ವಿಕೋಪಗಳ ಕರ್ತವ್ಯಗಳ ಒತ್ತಡಗಳ ನಡುವೆಯೂ ಸ್ವಾತಂತ್ರ್ಯ ದಿನಾಚರಣೆಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ನೇತೃತ್ವದಲ್ಲಿ ಆಡಳಿತ ಶಾಖೆ, ಚುನಾವಣಾ ಶಾಖೆ, ಆಹಾರ ಶಾಖೆ, ಭೂ ಸುಧಾರಣೆ ಶಾಖೆ, ನಾಡಕಚೇರಿ ಮತ್ತಿತರ ವಿಭಾಗಗಳ ನೌಕರರು ಸ್ವಚ್ಚತಾ ಕಾರ್ಯ ನಿರ್ವಹಿಸಿದರು. ಸಿಬ್ಬಂದಿಯ ಈ ಕಾರ್ಯಕ್ಕೆ ತಹಶೀಲ್ದಾರ್ ರಶ್ಮಿ ಎಸ್ ಆರ್ ಮೆಚ್ಚುಗೆ ವ್ಯಕ್ತ ಪಡಿಸಿದರು.–