ಎಣ್ಣೆಹೊಳೆ: 108 ಕೋ.ರೂ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ

ಕಾರ್ಕಳ : ಕರಾವಳಿ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಅತೀಹೆಚ್ಚಿನ ಮಳೆಯಾಗುತ್ತಿದ್ದರೂ ಅದನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗಳಿಲ್ಲದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಮರೆಯಾಗಿವೆ. ಈ ಹಿನ್ನಲೆಯಲ್ಲಿ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸ್ವರ್ಣಾ ನದಿಗೆ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆಯಿಂದ ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದು ಮತ್ತೆ ಕಾರ್ಕಳವನ್ನು ಹಸಿರಸಿರಿಯಿಂದ ಕಂಗೊಳಿಸುವುದೇ ನಮ್ಮ ಗುರಿಯಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್‌ಕುಮಾರ್ ಹೇಳಿದರು.

ಅವರು ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ108 ಕೋ.ರೂ ವೆಚ್ಚದಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.

ಪ್ರಮುಖವಾಗಿ ಮರ್ಣೆ, ಹಿರ್ಗಾನ, ಚಿಕ್ಕಲ್‌ಬೆಟ್ಟು, ಕುಕ್ಕುಂದೂರು, ಜೋಡುರಸ್ತೆ, ಕಾರ್ಕಳ ರಾಮಸಮುದ್ರ ಮುಂತಾದ ಕಡೆಗಳ ಸುಮಾರು 1500 ಹೆಕ್ಟೇರ್ ಕೃಷಿಭೂಮಿಗೆ ನೀರುಣಿಸುವ ಯೋಜನೆ ಇದಾಗಿದ್ದು, ಇದರೊಂದಿಗೆ ಕುಡಿಯುವ ನೀರಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು. ಪರಿಸರ ಹಾಗೂ ಜಲಸಂರಕ್ಷಣೆಯಲ್ಲಿ ಇನ್ನಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು,ಹೆಬ್ರಿ ಸಮೀಪದ ಸೀತಾನದಿಗೂ ಸುಮಾರು ೭೫ ಕೋ.ರೂ ವೆಚ್ಚದ ಬೃಹತ್ ನೀರಾವರಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಹಣಕಾಸು ವರ್ಷದಲ್ಲಿ ಅನುಮೋದನೆ ಪಡೆದು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಭವಿಷ್ಯದ ಪೀಳಿಗೆಗೆ ಅಂತರ್ಜಲ ಉಳಿಸುವ ನಿಟ್ಟಿನಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯುವ ಸಣ್ಣ ಸಣ್ಣ ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಗುರಿ ಹೊಂದಲಾಗಿದೆ ಇದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾಗೂ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಹಯೋಗ ಪಡೆಯಲಾಗುತ್ತಿದೆ ಎಂದರು.

ವಾರಾಹಿ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆಯಿದ್ದರೂ ಅದನ್ನೆಲ್ಲಾ ನಿವಾರಿಸಿ ಬೃಹತ್ ಯೋಜನೆಯನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಅಂತರ್ಜಲಮಟ್ಟ ಏರಿಕೆಯಾಗಲಿದೆ ಎಂದರು.ತಾ.ಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ್ ಅಧ್ಯಕ್ಷತೆ ವಹಿಸಿದ್ದರು.

error: Content is protected !!