ಸಮಾನ ವೇತನ,ಪಿಂಚಣಿ, ಇಎಸ್‌ಐ ನೀಡದೆ ಸರ್ಕಾರದಿಂದ ಮೋಸ: ಸಿಐಟಿಯು

ಉಡುಪಿ: ಬಿಸಿಯೂಟ ನೌಕರರಿಗೆ ಕನಿಷ್ಠ 6 ಸಾವಿರ ವೇತನ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಅಜ್ಜರಕಾಡಿನ ಹುತಾತ್ಮ ಸೈನಿಕ ಸ್ಮಾರಕದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಸರ್ಕಾರ ಕೊಟ್ಟ ಮಾತಿನಂತೆ ಕೂಡಲೇ ವೇತನ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರು ಚಲೋ ಹೋರಾಟ ನಡೆಸುತ್ತೇವೆ ಎಂದು ನೌಕರರು ಎಚ್ಚರಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷ ದಾಸ್‌ ಭಂಡಾರಿ ಮಾತನಾಡಿ, ರಾಜ್ಯದಲ್ಲಿ 1 ಲಕ್ಷದ 18 ಸಾವಿರ ಬಿಸಿಯೂಟ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಅವರನ್ನು ನೌಕರರೆಂದು ಪರಿಗಣಿಸಿ, ಸಮಾನ ವೇತನ, ಪಿಂಚಣಿ, ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಎಲ್‌ಐಸಿ, ಬಿಎಸ್‌ಎನ್‌ಎಲ್‌, ಇಂಡಿಯನ್‌ ಏರ್‌ಲೈನ್ಸ್‌ನಂತೆ ಬಿಸಿಯೂಟ ಯೋಜನೆಯನ್ನು
ಖಾಸಗೀಕರಣಗೊಳಿಸಲು ಸರ್ಕಾರ ಹುನ್ನಾರ ಮಾಡುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂಅವಕಾಶ ನೀಡಬಾರದು ಎಂದು ಹೇಳಿದರು.


ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್‌ ಮಾತನಾಡಿ, ಬಿಜೆಪಿ ಸರ್ಕಾರ ಸರ್ವಾಧಿಕಾರಿ
ರೀತಿಯಲ್ಲಿ ವರ್ತಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ದುಡಿಯುವವರ ಪಾತ್ರ ಮುಖ್ಯ.
ಆದರೆ ಆಳುವವರಿಗೆ ಅದು ಗೊತ್ತಿಲ್ಲ. ಬಜೆಟ್‌ನಲ್ಲಿ ವೇತನ ಹೆಚ್ಚಳದ ಬಗ್ಗೆ ಯಾವುದೇ
ಪ್ರಸ್ತಾಪ ಮಾಡಿದೆ, ರಾಜ್ಯ ಸರ್ಕಾರ ಬಿಸಿಯೂಟ ನೌಕರರಿಗೆ ಮೋಸ ಮಾಡಿದೆ ಎಂದು
ದೂರಿದರು.

ಸಿಐಟಿಯು ಕೋಶಾಧಿಕಾರಿ ಶಶಿಧರ್‌ ಗೊಲ್ಲ ಮಾತನಾಡಿ, ಕರ್ನಾಟಕದಲ್ಲಿ ಆರ್ಥಿಕ
ಪರಿಸ್ಥಿತಿ ನೆಲಕಚ್ಚಿದ್ದು, ಬಿಜೆಪಿಗೆ ಆಡಳಿತ ನಡೆಸಲು ಆಗುತ್ತಿಲ್ಲ. ಚುನಾವಣೆ
ಸಂದರ್ಭದಲ್ಲಿ ಮಹಿಳೆಯರಿಗೆ ಭರಪೂರ ಆಶ್ವಾಸನೆ ನೀಡುವ ಪಕ್ಷಗಳು, ಅಧಿಕಾರಕ್ಕೆ
ಬಂದನಂತರ ಮಹಿಳೆಯರ ಸಮಸ್ಯೆಯ ಕಡೆಗೆ ಕಣ್ಣೆತ್ತಿಯೂ ನೋಡಲ್ಲ. ಇದು ಇಂದಿನ
ಪ್ರಜಾಪ್ರಭುತ್ವ ವ್ಯವಸ್ಥೆಯ ದುಸ್ಥಿತಿ ಎಂದು ಅಭಿಪ್ರಾಯಪಟ್ಟರು.
ಸಂಘದ ಉಡುಪಿ ತಾಲ್ಲೂಕು ಅಧ್ಯಕ್ಷೆ ಸುನಂದ, ಕಾರ್ಯದರ್ಶಿ ಕಮಲ, ಗಿರಿಜಾ, ರತ್ನ,
ಸಿಐಟಿಯು ತಾಲ್ಲೂಕು ಅಧ್ಯಕ್ಷ ರಾಮ ಕರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್‌, ಉಮೇಶ್‌
ಕುಂದರ್‌, ನಳಿನಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!