ಶೂನ್ಯ ಬಂಡವಾಳ ಕೃಷಿಗೆ ಒತ್ತು; ನಿರ್ಮಲಾ ಸೀತಾರಾಮನ್
ನವದೆಹಲಿ: ಬಜೆಟ್ ನಲ್ಲಿ ಭೂಮಿತಾಯಿಯ ಮಗನಿಗೆ ನಿರೀಕ್ಷೆಯಂತೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಶೂನ್ಯ ಬಂಡವಾಳ ಕೃಷಿಯ ಅಗತ್ಯವನ್ನು ಪ್ರತಿಪಾದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ , ಕೃಷಿ ಕ್ಷೇತ್ರದ ಉದ್ಯಮಿಗಳ ಬೆಂಬಲಕ್ಕೂ ನಿಲ್ಲುವುದಾಗಿ ತಿಳಿಸಿದ್ದಾರೆ.
ಸಾವಯವ ಪದ್ಧತಿಯ ಮೇಲೆ ಅವಲಂಬಿತವಾದ ರಾಸಾಯನಿಕಗಳಿಂದ ಮುಕ್ತವಾದ ಸಹಜ ಕೃಷಿಯು ಸುಸ್ಥಿರವಾಗಿದ್ದು, ಅಧಿಕ ಬಂಡವಾಳ ಹೊರತಾಗಿರುತ್ತದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಭರವಸೆ ನೀಡಿದಂತೆ ರೈತ ವರ್ಗದ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಲಾಗುತ್ತಿದ್ದು, ವಾರ್ಷಿಕ 6 ಸಾವಿರ ರೂಗಳನ್ನು ಸರ್ಕಾರ ನೀಡುತ್ತಿದ್ದು, 14.5 ಕೋಟಿ ರೈತರಿಗೆ ಇದರ ಪ್ರಯೋಜನೆ ಸಿಗಲಿದೆ. ವಿತ್ತ ಸಚಿವೆಯಾಗಿ ಮೊದಲ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದು, ರೈತ ಸಮೂಹಕ್ಕೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.