ಇಡಿ ಸರದಿ ಕೆ.ಜೆ ಜಾರ್ಜ್ ಮೇಲೆ: ಮಾಜಿ ಸಚಿವರ ವಿರುದ್ಧ ದೂರು
ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ.ಕೆ ಶಿವಕುಮಾರ್ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿರುವ ಬೆನ್ನಲ್ಲೆ ಮತ್ತೊಬ್ಬ ಕಾಂಗ್ರೆಸ್ ನಾಯಕನ ವಿರುದ್ಧ ದೂರು ದಾಖಲಾಗಿದೆ.
ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಅಕ್ರಮವಾಗಿ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ, ಆಸ್ತಿ ವಿವರ ಘೋಷಣಾ ಪತ್ರದಲ್ಲಿ ಈ ಕುರಿತು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ಈಗ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಮೇಲೆ ಸಹ ಈ ಬಗ್ಗೆ ನಾವು ಇಡಿಗೆ ದೂರು ನೀಡಿದ್ದೆವು. ಎರಡು ವರ್ಷದ ಹಿಂದೆಯೇ ದೂರು ನೀಡಿದ್ದೆವು ಆದರೆ, ನಿಧಾನವಾಗಿ ತನಿಖೆ ನಡೆಸಿ ಇಡಿ ಕ್ರಮ ಕೈಗೊಂಡಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯದರ್ಶಿ ದೀಪಕ್ ಹೇಳಿದ್ದಾರೆ.
ಕೆಜೆ ಜಾರ್ಜ್ ನ್ಯೂಯಾರ್ಕ್ ಹಲವು ಸ್ಥಳಗಳಲ್ಲಿ ಆಸ್ತಿ ಖರೀದಿಸಿದ್ದಾರೆ, ಪ್ರಪಂಚದಲ್ಲೇ ಅತಿ ದುಬಾರಿ ರಿಯಲ್ ಎಸ್ಟೇಟ್ ತಾಣವಾಗಿರುವ ನ್ಯೂಯಾರ್ಕ್ ನಲ್ಲಿ ಜಾರ್ಜ್ ಆಸ್ತಿ ಖರೀದಿಸಿ ಗುಟ್ಚಾಗಿಟ್ಟಿದ್ದಾರೆ.
ಕೆ.ಜೆ ಜಾರ್ಜ್ ತಮ್ಮ ಆಸ್ತಿಗಳ ಬಗ್ಗೆ ಲೋಕಾಯುಕ್ತಕ್ಕೆ ವಿವರ ಸಲ್ಲಿಸಿದ್ದಾರೆ, ಆದರೆ ಚುನಾವಣಾ ಆಯೋಗಕ್ಕೆ ಆಸ್ತಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಹೀಗಾಗಿ ಆರ್ ಟಿ ಐ ಮೂಲಕ ದಾಖಲೆಗಳನ್ನು ಪಡೆಯುವುದು ಕಷ್ಟವಾಗಿತ್ತು, ಆದರೂ ಜಾರ್ಜ್ ಮತ್ತು ಅವರ ಕುಟುಂಬ ಸದಸ್ಯರ ಆಸ್ತಿ ವಿವರ ಪಡೆದಿದ್ದೇವೆ ಎಂದು ದೀಪಕ್ ತಿಳಿಸಿದ್ದಾರೆ.
ಜಾರ್ಜ್ ಅವರ ಜೊತೆ ಬೇರೆ ಯಾವ ರಾಜಕಾರಣಿ ಸೇರಿದ್ದಾರೆ ಎಂಬ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.