ಆರ್ಥಿಕ ಬಿಕ್ಕಟ್ಟು,ನಿರುದ್ಯೋಗ ಮರೆ ಮಾಚಲು ಟಿಪ್ಪು ವಿವಾದ: ಜಿಗ್ನೇಶ್

ಚಿತ್ರದುರ್ಗ: ದೇಶದ ಅನಾರೋಗ್ಯ ಪೀಡಿತ ಆರ್ಥಿಕ ವ್ಯವಸ್ಥೆ, ನಿರುದ್ಯೋಗದಂತಹ ನೈಜ ಮತ್ತು ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಲು ರಾಜ್ಯದ ಬಿಜೆಪಿ ಸರ್ಕಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿಚಾರವನ್ನು ಎಳೆದು ತಂದಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಪಾದಿಸಿದ್ದಾರೆ.

ಟಿಪ್ಪು ಸುಲ್ತಾನ್ ಅಧ್ಯಾಯವನ್ನು ಪಠ್ಯಪುಸ್ತಕದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ಕಾರ ನೈಜ ಸಮಸ್ಯೆಗಳಿಂದ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದೆ. ಇದು ಸಂಘಪರಿವಾರದ ಕಾರ್ಯಸೂಚಿಯಾಗಿದ್ದು, ಕೋಮುವಾದಿ ಮನೋಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಕಳೆದ 2008 ರ ಎಪ್ರಿಲ್‌ನಲ್ಲಿ ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ‘ಮೋದಿ ಕಾರ್ಯಕ್ರಮದಲ್ಲಿ ಕುರ್ಚಿ ತೂರಿ’ ಎಂಬ ವಿವಾದಾಸ್ಪದ ಹೇಳಿಕೆ ನೀಡಿದ ಆರೋಪದ ಮೇಲೆ ಜಿಗ್ನೇಶ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗಾಗಿ ಅವರು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು. 

ಟಿಪ್ಪು ಸುಲ್ತಾನ್ ಅವರ ಹೆಸರನ್ನೇ ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಇದು ಸಂಘ ಪರಿವಾರ ಮತ್ತು ಬಿಜೆಪಿಯ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ವೈವಿಧ್ಯತೆಯಲ್ಲೂ ಏಕತೆಯಿಂದಿರುವುದೇ ನಮ್ಮ ದೇಶದ ಸೌಂದರ್ಯ. ಆದರೆ, ಆರೆಸ್ಸೆಸ್ ಈ ವೈವಿಧ್ಯತೆಯನ್ನೇ ಕೊಲ್ಲಲು ಹೊರಟಿದೆ. ಹಿಂದೂ ಮುಸ್ಲಿಮರ ಮಧ್ಯೆ ಇರುವ ಕಂದಕವನ್ನೇ ಇನ್ನಷ್ಟು ದೊಡ್ಡದಾಗಿ ಮಾಡುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿಗೆ ಮುಸ್ಲಿಮರು ಹಾಗೂ ದಲಿತರು ದ್ವಿತೀಯ ದರ್ಜೆ ನಾಗರಿಕರಾಗಿದ್ದಾರೆ. ಕೆಲಸಕ್ಕೆ ಮಾತ್ರ ಅವರನ್ನು ಬಳಸಿಕೊಳ್ಳುವುದು ಅವರ ಅಜೆಂಡಾ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!