ಆರೋಗ್ಯ ಭದ್ರತೆ ಸರಕಾರದ ಆದ್ಯ ಕರ್ತವ್ಯ: ಸುನಿಲ್ ಕುಮಾರ್
ಕಾರ್ಕಳ: ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆಯನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು, ಯೋಜನೆಗಳು ಬರಬೇಕಾಗಿದೆ. ಅದರ ಪ್ರಯೋಜನ ಎಲ್ಲರಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ ಎನ್ನುವ ಆರೋಗ್ಯ ವಿಮೆಯನ್ನು ದೇಶದ್ಯಾದಂತ ಜಾರಿಗೊಳಿಸಿದ್ದಾರೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ನಿಟ್ಟೆ ಗ್ರಾಜಿಯಾ ಫೌಂಡೇಶನ್ ಟ್ರಸ್ಟ್, ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ತೆಳ್ಳಾರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ , ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ ಇದರ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಕರ್ನಾಟಕ ಯೋಜನೆ ಚಾಲನೆ, ಯೋಜನೆ ಮಾಹಿತಿ ಕಾರ್ಯಗಾರ ಹಾಗೂ ರಿಕ್ಷಾ ಚಾಲಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಬಡತನ ಹಾಗೂ ಹಣಕಾಸು ತೊಂದರೆಯಡಿ ಯಾರೂ ಆರೋಗ್ಯ ಸಮಸ್ಯೆಯಿಂದ ಬಳಲಬಾರದು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅಲ್ಲಿ ಸೌಲಭ್ಯಗಳು ಸಿಗದಿದ್ದ ವೇಳೆ ಅವರ ಪತ್ರದ ಆಧಾರದ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶವಿದೆ ಎಂದರು. ಕರ್ನಾಟಕದಲ್ಲೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯಗಳು ಸಿಗುತ್ತಿದೆ. ಆದರೂ ಸಣ್ಣಪುಟ್ಟ ನ್ಯೂನತೆಗಳು ಈ ಯೋಜನೆಯಡಿರುವುದು ಶಾಸಕನಾಗಿ ನನ್ನ ಗಮನಕ್ಕೆ ಬಂದಿದೆ. ರಾಜ್ಯ ಸಚಿವರ ಜತೆ ಮಾತನಾಡಿ, ಅವೆಲ್ಲವನ್ನು ಪರಿಹರಿಸಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವಲ್ಲಿ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು. ಆರೋಗ್ಯ ಎಲ್ಲರಿಗೂ ಅನಿವಾರ್ಯ ಹಾಗೂ ಅಗತ್ಯ ಎಂದರು.
ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಉದಯ ಎಸ್. ಕೋಟ್ಯಾನ್, ರೇಶ್ಮಾ ಶೆಟ್ಟಿ, ಸುಮಿತ್ ಶೆಟ್ಟಿ ಕೌಡೂರು, ಪುರಸಭೆ ಸದಸ್ಯೆ ಭಾರತಿ ಅಮೀನ್, ಕಾರ್ಕಳ ರಿಕ್ಷಾ-ಚಾಲಕ ಹಾಗೂ ಮಾಲಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ನಿರ್ದೇಶಕ ನರಸಿಂಹ ಪುರಾಣಿಕ, ಉಡುಪಿ ಜಿಲ್ಲಾ ಸಂಯೋಜನಾಧಿಕಾರಿ ಜಗನ್ನಾಥ್, ಆಸ್ಪತ್ರೆಯ ನಿರ್ದೇಶಕ ಡಾ. ಜಯರಾಮ್ ರೈ ಉಪಸ್ಥಿತರಿದ್ದರು.